ತುಮಕೂರು: ಜಿಲ್ಲೆಯ ತುರುವೇಕೆರೆ, ಹುಳಿಯಾರು, ತಿಪಟೂರು ಮತ್ತು ಕುಣಿಗಲ್ನಲ್ಲಿ ನವೆಂಬರ್ ೨ ರಿಂದ ಹೆಸರು ಕಾಳು ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.
ಗೂಗಲ್ ಮೀಟ್ ಮೂಲಕ ಅಧಿಕಾರಿಗಳೊಂದಿಗೆ ಜಿಲ್ಲಾ ಟಾಸ್ಕ್ ಪೋರ್ಸ್ ಸಭೆ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ನಫೆಡ್ ಸಂಸ್ಥೆ ಮೂಲಕ ಹೆಸರು ಕಾಳನ್ನು ಖರೀದಿ ಮಾಡಲು ನಿರ್ದೇಶನ ನೀಡಿದ್ದು, ಅದರಂತೆ ಪ್ರತಿ ಎಕರೆಗೆ ೪ ಕ್ವಿಂಟಾಲ್ನಂತೆ ಒಬ್ಬ ರೈತನಿಂದ ೨೦ ಕ್ವಿಂಟಾಲ್ ಹೆಸರು ಕಾಳನ್ನು ಖರೀದಿಸಲಾಗುವುದು. ಕೇಂದ್ರವು ಪ್ರತಿ ಕ್ವಿಂಟಾಲ್ ಹೆಸರು ಕಾಳಿಗೆ ೮೭೮೦ ರೂ.ಗಳ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ ಎಂದು ಅವರು ತಿಳಿಸಿದರು.
ಖರೀದಿ ಕೇಂದ್ರಗಳಲ್ಲಿ ಎಫ್ಎಕ್ಯೂ ಗುಣಮಟ್ಟದ ಹೆಸರು ಕಾಳನ್ನು ಖರೀದಿಸಲಾಗುವುದು. ಹೆಸರು ಕಾಳು ಖರೀದಿಗೆ ಮೊದಲು ನೋಂದಣಿ ಮಾಡಿಕೊಂಡ ರೈತರಿಗೆ ಆದ್ಯತೆ ನೀಡಬೇಕು. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನೂ ಸಹ ಪ್ರಾರಂಭಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಸಭೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕೃಷಿ ಮಾರುಕಟ್ಟೆ ಇಲಾಖೆ ಉಪನಿರ್ದೇಶಕ ಡಾ: ಬಿ. ರಾಜಣ್ಣ, ಸಮಿತಿಯ ಸದಸ್ಯರಾದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೆಣ್ಣವರ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಶಾರದಮ್ಮ ಸೇರಿದಂತೆ ಕೃಷಿ ಮಾರಾಟ ಮಹಾಮಂಡಳದ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.