ತುಮಕೂರು: ನಗರದ ಹೃದಯ ಭಾಗದಲ್ಲಿರುವ, ಅತ್ಯಧಿಕ ವಾಹನ ಸಾಂದ್ರತೆ ಹೊಂದಿರುವ ಡಾ. ಶಿವಕುಮಾರ ಸ್ವಾಮೀಜಿ ರಸ್ತೆಯಲ್ಲಿರುವ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಮಹಾನಗರ ಪಾಲಿಕೆ ಎಲ್‌ಇಡಿ ಪರದೆಯ ಕಾಮಗಾರಿಗಳನ್ನು ಕೆಲಸವನ್ನು ಕೈಗೊಂಡಿದ್ದು, ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಈ ರಾಷ್ಟ್ರೀಯ ಹೆದ್ದಾರಿಯನ್ನು ಕಳೆದ ಮೂರು ದಿನಗಳಿಂದ ಸಂಪೂರ್ಣ ಬಂದ್ ಮಾಡಿದ್ದು ಎಷ್ಟು ಸರಿ? ಈ ರೀತಿ ಬಂದ್ ಮಾಡಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ, ಪ್ರಯಾಣಿಕರಿಗೆ ಅನಾನುಕೂಲವಂತೆ ಕಾಮಗಾರಿ ಮಾಡಲು ಇವರಿಗೆ ಆದೇಶ ಕೊಟ್ಟಿರುವುದು ಯಾರು? ಎಂದು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಸದರಿ ಕಾಮಗಾರಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಈ ರಸ್ತೆಯಲ್ಲಿ ಯಾವುದೇ ಬಸ್ ಓಡಾಟಕ್ಕೆ ಅವಕಾಶವೇ ಇಲ್ಲ. ಸಾರ್ವಜನಿಕರು ಬಸ್ ಹತ್ತುವುದು, ಇಳಿಯುವುದು ಎಲ್ಲಿ ಅಂತಲೇ ಮಾಹಿತಿ ಇಲ್ಲ. ಇದರ ಬಗ್ಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಸಾರ್ವಜನಿಕವಾಗಿ ತಿಳಿಸಿಲ್ಲ. ಈ ಜೋಡಿ ರಸ್ತೆಯ ಒಂದು ಕಡೆ ರಸ್ತೆಯನ್ನು ಬಂದ್ ಮಾಡಿ ಮತ್ತೊಂದು ಕಡೆ ವಾಹನ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿತ್ತು. ಎರಡು ಕಡೆ ಸಂಪೂರ್ಣವಾಗಿ ರಸ್ತೆಯನ್ನು ಬಂದ್ ಮಾಡುವುದರ ಮೂಲಕ ತುಮಕೂರು ನಾಗರಿಕರು ವಿದ್ಯಾರ್ಥಿಗಳು ಹಿರಿಯರು ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದ ಕನಿಷ್ಠ ಅರಿವು, ವಿವೇಚನೆ ಅಧಿಕಾರಿಗಳಿಗೆ ಇಲ್ಲವೆ ಎಂದು ಶಾಸಕರನ್ನು ಕೇಳಿದ್ದಾರೆ.
ಪರ್ಯಾಯ ಮಾರ್ಗ ವ್ಯವಸ್ಥೆ ಮಾಡದೆ ರಸ್ತೆ ಬಂದ್ ಮಾಡಿ ಈ ಕಾಮಗಾರಿ ಆರಂಭಿಸಿರುವುದರಿಂದ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಓಡಾಟಕ್ಕೂ ಕೂಡ ಅಡ್ಡಿಯಾಗಿದೆ. ದಯವಿಟ್ಟು ಈ ಕೂಡಲೇ, ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ಮಾಡಿ, ಒಂದು ಕಡೆ ರಸ್ತೆಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿ.ಎಸ್. ಬಸವರಾಜು ಒತ್ತಾಯಿಸಿದ್ದಾರೆ.