ತುಮಕೂರು: ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕನೊಬ್ಬ ಚಾಲನೆಯಲ್ಲಿದ್ದ ಮೆಷಿನ್ಗೆ ಸಿಕ್ಕಿ ಮೃತಪಟ್ಟ ಘಟನೆ ತಡರಾತ್ರಿ ಕೋರಾ ವಸಂತನರಸಾಪುರ ಕೈಗಾರಿಕಾ ಪ್ರದೇಶದ ವಿಸಾಕ ಸಿಮೆಂಟ್ ಶೀಟ್ ಫ್ಯಾಕ್ಟರಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಮೃತ ಕಾರ್ಮಿಕ ವಿಜಯ್ ಗುಬ್ಬಿ ತಾಲ್ಲೂಕು ಮಂಚಲದೊರೆ ಭಾಗವದವನೆಂದು ಹೇಳಲಾಗುತ್ತಿದ್ದು, ಸಂಪೂರ್ಣ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ರಾತ್ರಿ 11.30 ರಿಂದ 12ರೊಳಗೆ ಈ ಘಟನೆ ಸಂಭವಿಸಿದ್ದು, ಕಾರ್ಮಿಕರ ಸೂಕ್ತ ರಕ್ಷಣಾ ಸೌಕರ್ಯಗಳ ಕೊರತೆ ಇದಕ್ಕೆ ಕಾರಣ ಎಂದು ದೂರಲಾಗುತ್ತಿದೆ. ಘಟನೆಯಿಂದ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದ ಗುತ್ತಿಗೆ ಕಾರ್ಮಿಕ ವಿಜಯ್ ಅವರನ್ನು ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆಂದು ತಿಳಿದುಬಂದಿದೆ.
ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.
ಸದರಿ ಕಾರ್ಮಿಕ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ವ್ಯಕ್ತಿಯನ್ನು ಮೆಷಿನ್ ಬಳಿ ಕೆಲಸ ಮಾಡಲು ಕಳಿಸಿದ ಬಗ್ಗೆಯೂ ಕಾರ್ಮಿಕ ಮುಖಂಡರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಗುತ್ತಿಗೆ ಆಧಾರದ ಕಾರ್ಮಿಕರನ್ನು ಮೆಷಿನರಿಗಳ ಬಳಿಯ ಜವಾಬ್ದಾರಿ ನೀಡಿರುವ ಕುರಿತು ಹಾಗೂ ಇಂಥಾ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ ಎಂಬ ಬಗ್ಗೆ ಕಾರ್ಮಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
ಮೃತ ಗುತ್ತಿಗೆ ಕಾರ್ಮಿಕನ ಪೋಷಕರು ಹಾಗೂ ಸಹ ಕಾರ್ಮಿಕರು ಕಾರ್ಖಾನೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಹೇಳುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.