ಬೆಂಗಳೂರು: ರಾಜ್ಯಕ್ಕಿಂದು ಆಗಮಿಸಿರುವ ಕೇಂದ್ರ ಸರ್ಕಾರದ ಬರ ಅಧ್ಯಯನದ 12 ಅಧಿಕಾರಿಗಳ ತಂಡಕ್ಕೆ ರಾಜ್ಯ ಸರ್ಕಾರ ಬರ ಪರಿಸ್ಥಿತಿಯಿಂದಾಗಿರುವ ಅಂದಾಜಿನ ನಷ್ಟದ ವರದಿಯನ್ನು ನೀಡಿದ್ದು, 3,705 ಕೋಟಿ ರೂ. ಪರಿಹಾರ ಬಿಡುಗಡೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ರಾಜ್ಯದ ಒಟ್ಟು ಬರ ಪರಿಸ್ಥಿತಿಯ ಕುರಿತು ಪರಿಶೀಲಿಸಿ ಕೇಂದ್ರಕ್ಕೆ ವಸ್ತುನಿಷ್ಠ ವರದಿ ಸಲ್ಲಿಸುವುದಾಗಿ ತಂಡದ ಮುಖ್ಯಸ್ಥ ಅಜಿತ್ ಕುಮಾರ್ ಸಾಹು ಭರವಸೆ ನೀಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು ಹಾಲಿ ಪರಿಸ್ಥಿತಿಯನ್ನು ಪರಾಮರ್ಶಿಸಿ ಸರ್ಕಾರ ನೀಡಿದ ವರದಿಯನ್ನು ಪರಿಶೀಲಿಸಿ ಮೂರು ದಿನಗಳ ಕಾಲ ಪ್ರವಾಸ ಅಧ್ಯಯನ ನಡೆಸಿ ಅಂತಿಮ ವರದಿ ನೀಡಲಾಗುವುದು ಎಂದರು.
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಡಿಸಿಎಂ ಡಾ. ಜಿ. ಪರಮೇಶ್ವರ್ ಕರ್ನಾಟಕದಲ್ಲಿ ಬರ ಪರಿಸ್ಥಿತಿಯ ಸಮಗ್ರ ಚಿತ್ರಣವನ್ನು ತೆರೆದಿಟ್ಟರು. ಮುಂಗಾರಿನ ಕೃಷಿ ಚಟುವಟಿಕೆಗಳು ಆರಂಭವಾಗಿರ ಬೇಕಾದ ಈ ಸಂದರ್ಭದಲ್ಲಿ ಮಳೆ ಮಳೆಯ ತೀವ್ರ ಕೊರತೆಯಿಂದ ಬಿತ್ತಿದ ಬೆಳೆಯೆಲ್ಲಾ ನಷ್ಟವಾಗಿದೆ. ಆಗಸ್ಟ್ ಕೊನೆ ಮತ್ತು ಅಕ್ಟೋಬರ್‌ನಲ್ಲಿ ಮಳೆಯಾಗಿದ್ದರೂ ಅದರಿಂದ ಕೃಷಿಗೆ ಯಾವುದೇ ಉಪಯೋಗವಿಲ್ಲದಂತಾಗಿದೆ ಎಂದು ವಿವರಿಸಿದ್ದಾರೆ.

‘ಹಸಿರು ಕಂಡಾಕ್ಷಣ ನಿರ್ಧಾರ ಬೇಡ’
ಕೇಂದ್ರ ಸರ್ಕಾರದ ಬರ ಅಧ್ಯಯನದ 12 ಅಧಿಕಾರಿಗಳ ತಂಡದೊಂದಿಗೆ ಮಾತನಾಡುತ್ತಾ ಬರದ ತೀವ್ರ ಹೊಡೆತದ ಬಗ್ಗೆ ವಿವರಿಸುತ್ತಾ, ತೋಟಗಾರಿಕೆ ಬೆಳೆಗಳ ಇಳುವರಿ ಕೂಡ ಕಡಿಮೆಯಾಗಿದೆ. ಹೀಗಾಗಿ ಅಧ್ಯಯನ ನಡೆಸುವ ಸ್ಥಳಗಳಲ್ಲಿ ಹಸಿರು ಇದ್ದಾಕ್ಷಣ ಬರ ಇಲ್ಲ ಎಂಬ ನಿರ್ಧಾರಕ್ಕೆ ಬರಬಾರದು. ಮಳೆಯ ವಾಸ್ತವಿತ ದತ್ತಾಂಶಗಳು ಹಾಗೂ ಕೃಷಿ ಮಾದರಿಗಳ ವೈಜ್ಞಾನಿಕ ವಿಶ್ಲೇಷಣೆ ನಡೆಯಬೇಕು, ಎನ್‌ಡಿಆರ್‌ಎಫ್ ಮಾನದಂಡಗಳ ಅನ್ವಯ ರಾಜ್ಯಕ್ಕೆ ಒಟ್ಟು 3,705.30 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡುವಂತೆ ಸಿಎಂ ಮನವಿ ಮಾಡಿದರು. ರೈತರು ಸಂಕಷ್ಟದಲ್ಲಿದ್ದರೆ ಇಡೀ ವ್ಯವಸ್ಥೆಯೇ ಸ್ತಬ್ಧಗೊಳ್ಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕುಡಿಯುವ ನೀರು, ಮೇವು ಸಂಗ್ರಹಣೆ, ಪಶುಪಾಲನೆ ಹಾಗೂ ರೈತರ ನೆರವಿಗೆ ತಕ್ಷಣವೇ ಅಗತ್ಯ ಪರಿಹಾರ ಕಲ್ಪಿಸಬೇಕೆಂದು ಕೋರಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಉಮಾ ಮಹಾದೇವನ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳ ಪರಿಶೀಲನೆಗೆ ಮೂರು ತಂಡ:
ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆಂದು ಬಂದಿರುವ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯ ತಂಡಗಳು ಅಕ್ಟೋಬರ್ ೩ರಿಂದ ೬ರವರೆಗೆ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಕ್ಷೇತ್ರ ಪರಿಶೀಲನೆ ನಡೆಸಲಿವೆ. ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ನೇತೃತ್ವದ ತಂಡವನ್ನು ಮೂರು ಉಪತಂಡಗಳಾಗಿ ವಿಭಾಗಿಸಿ, ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ, ಬೆಳೆ ಹಾನಿ, ನೀರಿನ ಕೊರತೆ ಹಾಗೂ ರಾಜ್ಯ ಸರ್ಕಾರ ನೀಡಿರುವ ವರದಿಯಲ್ಲಿನ ಅಂಶಗಳನ್ನು ಸ್ಥಳ ವಿಶ್ಲೇಷಣೆ ಮೂಲಕ ಪರಿಶೀಲಿಸಲು ಯೋಜೆ ರೂಪಿಸಲಾಗಿದೆ.
ಇದರಲ್ಲಿನ ಉಪತಂಡವೊಂದು ಮೊದಲು ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಲಿದೆ. ಎರಡನೇ ತಂಡ ಹಾಸನ, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾಗೂ ಮೂರನೇ ತಂಡ ಯಾದಗಿರಿ, ರಾಯಚೂರು, ಬಾಗಲಕೋಟೆ ಹಾಗೂ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ.