ಬೆಂಗಳೂರು: ರಾಜ್ಯ ಸರ್ಕಾರ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದ್ದು, ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿನ ಖರೀದಿ ದರ ಅಥವಾ ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ 16 ಹಾಲು ಒಕ್ಕೂಟಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ನೀಡಿದ್ದ ಭರವಸೆಯಂತೆ ಇಂದಿನ ಸಚಿವ ಸಂಪುಟ ಸಭೆಯತ್ತ ಹಾಲು ಉತ್ಪಾದಕರು ಹಾಗೂ ಹೈನುಗಾರರ ಚಿತ್ತ ನೆಟ್ಟಿದೆ.
ಹಾಲು ಉತ್ಪಾದಕರ ಬೇಡಿಕೆಯಂತೆ ಪ್ರತಿ ಲೀಟರ್ಗೆ 10 ರೂ. ದರ ಹೆಚ್ಚಳ ಮಾಡುವ ಒತ್ತಡವನ್ನು 16 ಹಾಲು ಒಕ್ಕೂಟಗಳು ಹೇರುತ್ತಿದ್ದು, ಉತ್ಪಾದಕರ ಬೇಡಿಕೆಯಂತೆ ಪೂರ್ಣ ಏರಿಕೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು, ಹಾಲು ಒಕ್ಕೂಟಗಳು ಹಾಗೂ ಗ್ರಾಹಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳದಂತೆ ದರ ಪರಿಷ್ಕರಣೆ ಮಾಡಲಿದೆ ಎಂದು ತಿಳಿದುಬಂದಿದೆ., ಪ್ರತಿ ಲೀಟರ್ಗೆ ಸುಮಾರು ೩ರಿಂದ ೫ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯ ಬಗ್ಗೆ ಚಿಂತನೆ ನಡೆಸಲಾಗಿದೆ.
ಗ್ರಾಹಕರ ಮೇಲೆ ಸಂಪೂಋಣ ಹೆಚ್ಚುವರಿ ಮೊತ್ತವನ್ನು ಹೇರಿದರೆ ಹಾಲಿನ ಬೆಲೆ ಏರಿಕೆಯಾಗಿ ಜನರ ಮೇಲೂ ಹೊರೆ ಬೀಳಲಿದೆ. ಹೀಗಾಗಿ ಉತ್ಪಾದಕರು, ಹಾಲು ಒಕ್ಕೂಟಗಳು, ಸರ್ಕಾರ ಮತ್ತು ಗ್ರಾಹಕರು ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಸಚಿವ ಸಂಪುಟ ಸಭೆಯ ಬಳಿಕ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಹಾಲಿನ ದರ ಅಥವಾ ಪ್ರೋತ್ಸಾಹ ಧನ ಹೆಚ್ಚಳದ ಕುರಿತು ಸರ್ಕಾರ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.