ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿಯ ನಿಡವಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಾಳ್ಯ ಗ್ರಾಮದ ರೇವಣ್ಣ ಹಾಗೂ ಹುಲಿಯೂರಮ್ಮ ದಂಪತಿಗಳ ಮನೆಯಲ್ಲಿ ಸೀಮಂತ ಸಂಭ್ರಮ. ಮನೆಯ ಮಗಳಂತೆ ಬೆಳೆದ ಈಗ ಗರ್ಭಿಣಿಯಾಗಿರುವ ಅವರ ಹಳ್ಳಿಕಾರ್ ಹಸುವಿಗೆ ಸೀಮಂತ ಮಾಡಿ ಸಂಭ್ರಮಪಟ್ಟರು.
ಹಸುವಿಗೆ ಸ್ನಾನ ಮಾಡಿಸಿ, ಸೀರೆ ಉಡಿಸಿ, ಹೂವಿನ ಅಲಂಕಾರ ಮಾಡಿದರು. ಹಸುವಿನ ಸೀಮಂತಕ್ಕೆ ನೆಂಟರು, ಇಷ್ಟರನ್ನು ಆಹ್ವಾನಿಸಿ ಸಿಹಿ ಊಟ ಬಡಿಸಿ ಆತಿಥ್ಯ ನೀಡಿದರು. ಬಂದವರೆಲ್ಲಾ ಗರ್ಭಿಣಿ ಹಸುವಿನ ಮೈ ನೇವರಿಸಿ ಹಾರೈಸಿದರು.
ಸ್ಥಳೀಯ ಮುಖಂಡ, ಹೆಬ್ಬೂರು ಜಿಲ್ಲಾ ಪಂಚಾಯಿತಿ ಚುನಾವಣೆ ಆಕಾಂಕ್ಷಿ ವೈ.ಟಿ. ನಾಗರಾಜ್ ಅವರು ರೇವಣ್ಣ ಮನೆಯ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇದೊಂದು ಅಪರೂಪದ, ಮನಮಿಡಿಯುವ ಕಾರ್ಯಕ್ರಮ. ಹಸುವನ್ನು ಮಗಳಂತೆ ಪ್ರೀತಿಸಿ ಬೆಳೆಸಿದ ರೇವಣ್ಣ ದಂಪತಿ ಈಗ ಸೀಮಂತ ಮಾಡುತ್ತಿರುವುದು ಅವರ ಪ್ರಾಣಿ ಪ್ರೀತಿಯನ್ನು ತೋತಿಸುತ್ತದೆ ಎಂದು ಶ್ಲಾಘಿಸಿದರು.
ಈ ವೇಳೆ ಮಾತನಾಡಿದ ರೇವಣ್ಣ, ಈ ಹಸು ಕೇವಲ ಪ್ರಾಣಿಯಲ್ಲ, ನಮ್ಮ ಕುಟುಂಬದ ಸದಸ್ಯೆ. ಹಸು ಸಾಕಾಣಿಗೆ ನಮಗೆ ವಂಶಪಾರಂಪರ್ಯವಾಗಿ ಬೆಳೆದುಬಂದಿದೆ. ನಮ್ಮ ಪೂರ್ವಜರು ಇದೇ ತಳಿಯ ಹಸುಗಳ ಹಾಲು, ಮೊಸರು, ತುಪ್ಪ ಕುಡಿದು ಬೆಳೆದಿದ್ದರು ಎಂದು ಹೇಳಿದರು.