ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
ತುರುವೇಕೆರೆ : ಆಯುಧಪೂಜೆ, ವಿಜಯದಶಮಿಯಲ್ಲಿ ರೈತರಿಗೆ, ವ್ಯಾಪಾರಸ್ಥರಿಗೆ ಆದಾಯ ತಂದುಕೊಡುವ ವಸ್ತು ಬೂದುಗುಂಬಳಕಾಯಿ. ಆದರೆ ಈ ವರ್ಷ ಅದೇ ಬೂದುಗುಂಬಳಕಾಯಿ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಕೈಕಚ್ಚಿದೆ. ರಸ್ತೆಗಳಲ್ಲಿ ರಾಶಿ ರಾಶಿ ಬೂದುಗುಂಬಳಕಾಯಿ ಬಿದ್ದು ಕೊಳೆಯುತ್ತಿದೆ. ಬಂಡವಾಳ ಹಾಕಿದ ರೈತರು, ವ್ಯಾಪಾರಸ್ಥರು ನಷ್ಟದಿಂದ ಕಂಗಾಲಾಗಿದ್ದಾರೆ.
ಆಯುಧಪೂಜೆ, ವಿಜಯದಶಮಿಯಲ್ಲಿ ಬಲಿ ಪೂಜೆ ನಡೆಸಲು ಬೂದುಗುಂಬಳಕಾಯಿ ಬಳಸುವುದು ನಮ್ಮ ಸಂಸ್ಕೃತಿಯಲ್ಲಿ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಈ ಹಬ್ಬದಲ್ಲಿ ಬೂದುಗುಂಬಳಕಾಯಿಗೆ ಎಲ್ಲಿಲ್ಲದ ಬೇಡಿಕೆ. ವಾಹನಗಳು, ಅಂಗಡಿಮುಂಗಟ್ಟುಗಳು, ಯಂತ್ರೋಪಕರಣ, ಕಾರ್ಖಾನೆಗಳು ಸೇರಿದಂತೆ ಹಲವೆಡೆ ದೇವರಿಗೆ ಪೂಜೆ ಸಲ್ಲಿಸಿ ಬೂದುಗುಂಬಳಕಾಯಿಯನ್ನು ಈಡುಗಾಯಿ ಒಡೆಯುವುದು ಸರ್ವೇ ಸಾಮಾನ್ಯ. ಹಬ್ಬದಲ್ಲಿ ಬೂದುಗುಂಬಳಕಾಯಿ, ಹೂವು, ನಿಂಬೆಹಣ್ಣಿನ ವ್ಯಾಪಾರಕ್ಕೆ ಬಹಳ ಬೇಡಿಕೆ. ಆದರೆ ಈ ವರ್ಷ ಬೂದುಗುಂಬಳಕಾಯಿ ಅಂದುಕೊಂಡಷ್ಟು ವ್ಯಾಪಾರವಾಗಿಲ್ಲ. ನಿರೀಕ್ಷೆಗೂ ಮೀರಿ ಮಾರುಕಟ್ಟೆಗೆ ಬಂದ ಕುಂಬಳಕಾಯಿಯನ್ನು ಖರೀದಿಸುವವರೇ ಇಲ್ಲವಾಗಿ, ರಸ್ತೆಬದಿಗಳಲ್ಲಿ ರಾಶಿ ಕುಂಬಳಕಾಯಿಗಳು ವಿಜಯದಶಮಿ ಮುಗಿದ ನಂತರವೂ ಬಿದ್ದಿದೆ.
ಬೂದುಗುಂಬಳಕಾಯಿ ಕೆ.ಜಿ.ಗೆ 30 ರಿಂದ 100 ರೂಗಳಿಗೂ ಹೆಚ್ಚು ವ್ಯಾಪಾರವಾಗುತ್ತದೆ. ಒಂದು ದಪ್ಪನೆಯ ಕುಂಬಳಕಾಯಿ 300 ರಿಂದ 500 ರೂಗಳವರೆಗೆ ವ್ಯಾಪಾರವಾದ ಉದಾಹರಣೆಗಳುಂಟು. ಆಯುಧಪೂಜೆಯಲ್ಲಿ ಹೆಚ್ಚು ವ್ಯಾಪಾರ ನಡೆಯುತ್ತದೆಂಬ ನಿರೀಕ್ಷೆಯ ಕಂಗಳನ್ನು ಹೊತ್ತು ಹೆಚ್ಚು ಬೂದುಗುಂಬಳಕಾಯಿಯನ್ನು ಬೆಳೆದ ರೈತರು, ರೈತರಿಂದ ಖರೀದಿಸಿದ ವ್ಯಾಪಾರಸ್ಥರು ಟಾಟಾ ಏಸ್, ಮಿನಿಲಾರಿ, ಟ್ರಾಕ್ಟರ್ ಗಳಲ್ಲಿ ಮಾರುಕಟ್ಟೆಗೆ ಬೂದುಗುಂಬಳಕಾಯಿ ತಂದು ಹಾಕಿದ್ದರು. ಪಟ್ಟಣದ ತಾಲ್ಲೂಕು ಕಛೇರಿ ವೃತ್ತ, ಬಿಇಒ ಕಛೇರಿ ಮುಂಭಾಗ, ರಾಘವೇಂದ್ರ ಭವನ್ ಮುಂಭಾಗ, ಮಾಯಸಂದ್ರ ವೃತ್ತ, ದಬ್ಬೇಘಟ್ಟ ರಸ್ತೆ, ಸಂತೆ ಮೈದಾನ, ಪ್ರವಾಸಿ ಮಂದಿರದ ಬಳಿ ಹೀಗೆ ಹಲವೆಡೆ ಬೂದುಗುಂಬಳಕಾಯಿಯ ರಾಶಿ ರಾಶಿ ಮಾರಾಟಕ್ಕೆ ಇಡಲಾಗಿತ್ತು. ಎಂದಿನಂತೆ ಬೂದುಗುಂಬಳಕಾಯಿಯು ಮಾರಾಟವಾದರೂ ಖರೀದಿದಾರರ ಸಂಖ್ಯೆ ಹೆಚ್ಚಿರದ ಕಾರಣ ಹಾಗೂ ಅತಿ ಹೆಚ್ಚು ಬೂದುಗುಂಬಳಕಾಯಿ ಈ ಬಾರಿ ಮಾರುಕಟ್ಟೆಗೆ ಬಂದ ಕಾರಣ ಸಾವಿರಾರು ಕುಂಬಳಕಾಯಿಗಳು ವ್ಯಾಪಾರವಾಗದೆ ಉಳಿದುಕೊಂಡಿದೆ.
ಅತಿ ಹೆಚ್ಚು ಬೂದುಗುಂಬಳಕಾಯಿ ಈ ಬಾರಿ ಮಾರುಕಟ್ಟೆಗೆ ಬಂದ ಕಾರಣ ಬೆಲೆಯೂ ತೀವ್ರ ಕುಸಿದಿದೆ. ಮಾರುಕಟ್ಟೆಗೆ ಬೂದುಗುಂಬಳಕಾಯಿ ಬಂದ ಪ್ರಾರಂಭದಲ್ಲಿ ಕೆ.ಜಿ.ಗೆ 30 ರಿಂದ 50 ರೂಗಳಿಗೆ ಮಾರಾಟವಾಗುತ್ತಿತ್ತು. ತದನಂತರದಲ್ಲಿ ಒಂದು ಕುಂಬಳಕಾಯಿ 50 ರಿಂದ 100 ರೂಗೆ ಸಿಗುವಂತಾಯಿತು. ಎರಡು ದಿನದ ಹಬ್ಬದ ಅಂತ್ಯದ ವೇಳೆಗೆ 20 ರೂಗಳಿಗೆಲ್ಲಾ ಕುಂಬಳಕಾಯಿ ನೀಡುತ್ತಿದ್ದುದು ಕಂಡುಬಂದಿತು. ಬುಧವಾರ ವಿಜಯದಶಮಿಯ ಬೆಳಿಗ್ಗೆ ಸಾಕಷ್ಟು ಮಂದಿ ಉಚಿತವಾಗಿಯೂ ಕುಂಬಳಕಾಯಿ ನೀಡುತ್ತಿದ್ದುದು ವ್ಯಾಪಾರ ಎಷ್ಟರಮಟ್ಟಿಗೆ ಕುಸಿದಿದೆ ಎಂಬುದನ್ನು ಸಾರಿ ಹೇಳುತ್ತಿತ್ತು.
ಕಳೆದ ವರ್ಷ ಆಯುಧಪೂಜೆ, ವಿಜಯದಶಮಿಯಲ್ಲಿ ಬೂದುಗುಂಬಳಕಾಯಿ ವ್ಯಾಪಾರದಿಂದ ಭಾರೀ ಲಾಭಗಳಿಸಿದ್ದ ರೈತರು, ವ್ಯಾಪಾರಸ್ಥರು ಅದೇ ನಿರೀಕ್ಷೆಯಲ್ಲಿ ಈ ಬಾರಿ ಹೆಚ್ಚು ಬೂದುಗುಂಬಳಕಾಯಿ ಬೆಳೆದಿದ್ದರು. ವ್ಯಾಪಾರಸ್ಥರು ಸಹ ಹೆಚ್ಚು ಬೂದುಗುಂಬಳಕಾಯಿ ಖರೀದಿಸಿ ಮಾರುಕಟ್ಟೆಗೆ ಹಾಕಿದ್ದರು. ಆದರೆ ಉತ್ಪಾದನೆ ಹೆಚ್ಚಾದ ಕಾರಣ ಬೇಡಿಕೆ ಇಲ್ಲವಾಗಿ ಬೂದುಗುಂಬಳ ಬೇಡಿಕೆ ಕಳೆದುಕೊಂಡು ರೈತರು, ವ್ಯಾಪಾರಸ್ಥರು ನಿರೀಕ್ಷಿತ ಲಾಭಗಳಿಸಲಾಗದೆ ನಷ್ಟ ಅನುಭವಿಸುವಂತಾಯಿತು.
ಮಾಧ್ಯಮದೊಂದಿಗೆ ಮಾತನಾಡಿದ ವ್ಯಾಪಾರಿ ರಾಘು, ಈ ವರ್ಷ ಆಯುಧಪೂಜೆಗೆ ಬೂದುಗುಂಬಳಕಾಯಿ ಹೆಚ್ಚು ವ್ಯಾಪಾರವಾಗುವುದೆಂಬ ನಿರೀಕ್ಷೆಯಲ್ಲಿ ಸಾಲ ಮಾಡಿ ಸುಮಾರು 3 ಲಕ್ಷ ರೂ ಖರ್ಚು ಮಾಡಿ ಬೂದುಗುಂಬಳಕಾಯಿ ತಂದು ಮಾರುಕಟ್ಟೆಗೆ ಹಾಕಿದ್ದೆ. ಹಬ್ಬ ಮುಗಿದು 2 ದಿನವಾಗಿದೆ. ಸುಮಾರು 1 ಲಕ್ಷ ಮೌಲ್ಯದ ಕುಂಬಳಕಾಯಿ ಉಳಿದಿದೆ. ಬಂಡವಾಳ ಹಾಕಿದ ಅಸಲೂ ಸಹ ಬಂದಿಲ್ಲ. ಹಬ್ಬದ ಸಂಭ್ರಮದಲ್ಲಿ ನಮಗೆ ನಷ್ಟ ಉಂಟಾಗಿದೆ. ಮಾರುಕಟ್ಟೆಗೆ ಹೆಚ್ಚು ಬೂದುಗುಂಬಳಕಾಯಿ ಬಂದಿದ್ದರಿಂದ ಬೆಲೆ ಕುಸಿದು ಕಾಯಿ ಕೇಳುವವರಿಲ್ಲದಾಗಿದೆ.