ವರದಿ ಚೇತನ್ ಜಿ ಜಾನಕಲ್
ಚಿಕ್ಕನಾಯಕನಹಳ್ಳಿ/ಹುಳಿಯಾರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿ ಐದಾರು ತಿಂಗಳು ಕಳೆದರೂ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿ ತಾಲೂಕಿನ ತಮ್ಮಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರದೊಳಗೆ ಬಾಕಿ ಹಣ ರೈತರ ಖಾತೆಗೆ ಜಮೆಯಾಗದಿದ್ದರೆ ಸೋಮವಾರ ತಾಲೂಕು ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ರೈತರು ಸಭೆ ನಡೆಸಿ ರಾಗಿ ಹಣ ಪಾವತಿಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಬರದ ನಡುವೆ ಹಣವೂ ಇಲ್ಲದೆ ಸಂಕಷ್ಟ
ಮಳೆ ಕೊರತೆಯಿಂದ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಕಷ್ಟಪಟ್ಟು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲಾಗಿದೆ. ರಾಗಿ ಮಾರಾಟಕ್ಕಾಗಿ ರೈತರು ದಿನಗಟ್ಟಲೆ ಕಾದು, ಕೆಲ ಸಂದರ್ಭಗಳಲ್ಲಿ ರಾತ್ರಿಯೂ ರಸ್ತೆಯಲ್ಲೇ ಕಾಲ ಕಳೆಯಬೇಕಾಗಿತ್ತು. ಆದರೆ ಉತ್ಪನ್ನ ಮಾರಾಟವಾಗಿ ತಿಂಗಳುಗಳೇ ಕಳೆದರೂ ಹಣ ಮಾತ್ರ ಖಾತೆಗೆ ಬಂದಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ರಾಗಿ ಮಾರಾಟದ ಹಣ ರೈತರ ಕುಟುಂಬ ನಿರ್ವಹಣೆಗೆ ಅತ್ಯವಶ್ಯಕವಾಗಿದ್ದು, ಹಣ ಬಿಡುಗಡೆಯಾಗದಿರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಯಳನಾಡು ಭಾಗದಲ್ಲಿ ಗೋಶಾಲೆಗೆ ಆಗ್ರಹ: ಬರ ಪರಿಸ್ಥಿತಿಯಿಂದ ಯಳನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಈ ಭಾಗದಲ್ಲಿ ಗೋಶಾಲೆ ಆರಂಭಿಸಿ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದರು. ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.
‘ಶೀಘ್ರ ಹಣ ಬಿಡುಗಡೆಯಾಗಲಿದೆ’ ಎಂಬ ಭರವಸೆ
ರಾಗಿ ಹಣ ಪಾವತಿ ಕುರಿತು ಎಪಿಎಂಸಿ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರನ್ನು ಸಂಪರ್ಕಿಸಿದಾಗ ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ ಎಂಬ ಭರವಸೆ ನೀಡಲಾಗಿದೆ. ಆದರೆ ಹಣ ಯಾವ ದಿನ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ರೈತರು ತಿಳಿಸಿದ್ದಾರೆ. ಕಳೆದ ತಿಂಗಳು ನಡೆದ ಕೆಡಿಪಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿದ್ದು, ಸರ್ಕಾರದ ಗಮನಕ್ಕೆ ತರುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದರು. ಆದರೆ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಕೆಡಿಪಿ ಸದಸ್ಯ ಹಾಗೂ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ದೇವರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧಾರ
ರೈತರ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ರೈತರು ಒತ್ತಾಯಿಸಿದರು. ಈ ಸಂಬಂಧ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ರೈತರು ನಿರ್ಧರಿಸಿದ್ದಾರೆ. ಶನಿವಾರದೊಳಗೆ ಹಣ ಖಾತೆಗೆ ಜಮೆಯಾಗದಿದ್ದರೆ ಸೋಮವಾರ ತಾಲೂಕು ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ರೈತರಾದ ಕಾಟಯ್ಯ, ಪೂಜಾರಿ ಕಾಟಲಿಂಗಯ್ಯ, ಚಂದ್ರಯ್ಯ ಕಲಸ್ನ, ಗೋವಿಂದಪ್ಪ, ಗಂಗಾಧರಯ್ಯ, ಕೃಷ್ಣಮೂರ್ತಿ, ಸತ್ತೇನ ಕಾಟಯ್ಯ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು