ವರದಿ: ಚೇತನ್ ಜಿ ಜಾನಕಲ್
ಚಿಕ್ಕನಾಯಕನಹಳ್ಳಿ: ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ನಕಲಿ ಸಾಗುವಳಿ ಚೀಟಿ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸಿ, ಪ್ರಕರಣಕ್ಕೆ ಸಂಬಂಧಿಸಿದವರ ಹಣಕಾಸು ವ್ಯವಹಾರಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿ ಆಟೋ ಮಂಜುನಾಥ್, ಶ್ರೀಧರ್, ಎಂ.ಡಿ. ಹುಸೇನ್, ಗುಂಡ ಹೊನ್ನೆಬಾಗಿ, ಪ್ರಸನ್ನ ಸೇರಿದಂತೆ ಇತರರು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಮಮತಾ ಎಂ. ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಕರಣ ದಾಖಲಾಗಿದ್ದು ಸುಮಾರು 10 ತಿಂಗಳು ಕಳೆದಿದ್ದರೂ ತನಿಖೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಇದರಿಂದ ಪ್ರಕರಣದ ಕುರಿತು ಹಲವು ಅನುಮಾನಗಳು ಮೂಡುತ್ತಿವೆ ಎಂದು ದೂರುದಾರರು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಹೊರತರಲು ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ. ಹಿಂದಿನ ತಹಶೀಲ್ದಾರ್ ಅವರ ಪಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಹಾಗೂ ಭೀಮಸಂದ್ರ ವೃತ್ತದ ಗ್ರಾಮ ಸಹಾಯಕರ ಬ್ಯಾಂಕ್ ಖಾತೆಗಳಲ್ಲಿ ಪ್ರಕರಣದ ಅವಧಿಯಲ್ಲಿ ನಡೆದಿರುವ ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಅದೇ ರೀತಿ ಹುಳಿಯಾರು ರಾಜಸ್ವ ನಿರೀಕ್ಷಕರ ಕಚೇರಿ, ಅಭಿಲೇಖಾಲಯ ಹಾಗೂ ಆರ್‌ಯುಸಿ (RUC) ವಿಭಾಗಕ್ಕೆ ಸಂಬಂಧಿಸಿದ ಸಿಬ್ಬಂದಿಯ ಬ್ಯಾಂಕ್ ಖಾತೆಗಳಲ್ಲಿನ ಹಣಕಾಸು ವ್ಯವಹಾರಗಳನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಸಾಗುವಳಿ ಚೀಟಿಗಳ ತಯಾರಿಕೆ, ವಿತರಣೆ, ದಾಖಲೆಗಳ ನಿರ್ವಹಣೆ ಹಾಗೂ ಅರ್ಜಿದಾರರು ಮತ್ತು ಫಲಾನುಭವಿಗಳೊಂದಿಗೆ ನಡೆದಿರುವ ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಗತ್ಯವಿದ್ದಲ್ಲಿ ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಬ್ಯಾಂಕ್ ದಾಖಲೆಗಳು ಹಾಗೂ ಡಿಜಿಟಲ್ ಹಣಕಾಸು ವ್ಯವಹಾರಗಳ ವಿವರಗಳನ್ನು ಪಡೆದು ಪರಿಶೀಲಿಸಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.
ಪ್ರಕರಣದಲ್ಲಿ ಯಾವುದೇ ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿ ಅಥವಾ ಇತರ ವ್ಯಕ್ತಿಗಳ ಪಾತ್ರ ತನಿಖೆಯಲ್ಲಿ ದೃಢಪಟ್ಟರೆ, ಅವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಯಾವುದೇ ಒತ್ತಡಕ್ಕೆ ಒಳಗಾಗದೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ತನಿಖೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆ ಅಥವಾ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಗೆ ವಹಿಸಿ, ಶೀಘ್ರವಾಗಿ ಸಮಗ್ರ ತನಿಖೆ ಪೂರ್ಣಗೊಳಿಸಬೇಕು ಎಂದು ಆಟೋ ಮಂಜುನಾಥ್, ಶ್ರೀಧರ್, ಎಂ.ಡಿ. ಹುಸೇನ್, ಗುಂಡ ಹೊನ್ನೆಬಾಗಿ, ಪ್ರಸನ್ನ ಸೇರಿದಂತೆ ಇತರ ದೂರುದಾರರು ಆಗ್ರಹಿಸಿದ್ದಾರೆ.