ವರದಿ: ಚೇತನ್ ಜಿ ಜಾನಕಲ್
ಚಿಕ್ಕನಾಯಕನಹಳ್ಳಿ: ತಾಲೂಕಿನ ತಿಮ್ಮನಹಳ್ಳಿ, ಸಿದ್ದನಕಟ್ಟೆ ಹಾಗೂ ಬೆಳವಾಡಿಡಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪರಿಹಾರಕ್ಕಾಗಿ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರು ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದರು.
ಇತ್ತೀಚೆಗಷ್ಟೇ ತಿಮ್ಮನಹಳ್ಳಿ ಗ್ರಾಮದ ಮಹಿಳೆಯರು ಬೆಂಗಳೂರಿಗೆ ತೆರಳಿ ವಿಧಾನಸೌಧದಲ್ಲಿ ಟಿ.ಬಿ. ಜಯಚಂದ್ರ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಗ್ರಾಮದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ, ಅಂತರ್ಜಲ ಕುಸಿತ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಅಗತ್ಯದ ಕುರಿತು ವಿವರಿಸಿ ಮನವಿ ಸಲ್ಲಿಸಿದ್ದರು. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಮುಖ್ಯಮಂತ್ರಿ ಅವರಿಗೂ ಮನವರಿಕೆ ಮಾಡಿಕೊಟ್ಟು, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು.
ಇದರ ಮುಂದುವರಿದ ಭಾಗವಾಗಿ ಇಂದು ತಿಮ್ಮನಹಳ್ಳಿ ಗ್ರಾಮದ ತಮ್ಮ ನಿವಾಸಕ್ಕೆ ಆಗಮಿಸಿದ್ದ ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರನ್ನು ಜಯಚಂದ್ರ ಅವರು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿದರು. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಮತ್ತೊಮ್ಮೆ ವಿವರಿಸಿ, ಕುಡಿಯುವ ನೀರಿನ ತೊಂದರೆಯಿಂದ ಗ್ರಾಮಗಳಲ್ಲಿ ಜನರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಗಮನ ಸೆಳೆದರು.
ಭದ್ರಾ ಮೇಲ್ದಂಡೆ ಯೋಜನೆಯ ಸುರಂಗ ಮಾರ್ಗದಿಂದಾಗಿ ತಿಮ್ಮನಹಳ್ಳಿ, ಸಿದ್ದನಕಟ್ಟೆ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಬೋರ್‌ವೆಲ್‌ಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ ಎಂದು ಮನವಿಯಲ್ಲಿ ತಿಳಿಸಿದರು.
ಕೆರೆಗಳಿಗೆ ನೀರು ತುಂಬಿಸುವಂತೆ ಬೇಡಿಕೆ
ಗ್ರಾಮಸ್ಥರ ಪ್ರಮುಖ ಬೇಡಿಕೆಯಂತೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಗಂಟೇನಹಳ್ಳಿ ಕೆರೆಗೆ ನೀರು ಹರಿಸುವುದು ಹಾಗೂ ಬೋರನಕಣಿವೆಯಿಂದ ಸಿದ್ದನಕಟ್ಟೆ ಕೆರೆಗೆ ನೀರು ತುಂಬಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಗ್ರಾಮಸ್ಥರ ಮನವಿ ಸ್ವೀಕರಿಸಿದ ಟಿ.ಬಿ. ಜಯಚಂದ್ರ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು. ಕೆರೆಗಳಿಗೆ ನೀರು ಹರಿಸುವ ಸಾಧ್ಯತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಎಇಇ ನಂದೀಶ್ ಉಪಸ್ಥಿತರಿದ್ದರು. ಇಂಜಿನಿಯರ್‌ಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ನೀರು ಹರಿಸುವ ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಸರ್ಕಾರದ ಗಮನಕ್ಕೆ ತರುವ ಭರವಸೆ: ತಿಮ್ಮನಹಳ್ಳಿ ಹಾಗೂ ಸಿದ್ದನಕಟ್ಟೆ ಭಾಗದ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು, ಅಗತ್ಯವಿರುವ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದು ಹಾಗೂ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು “ಕುಡಿಯುವ ನೀರು ನಮ್ಮ ಮೂಲಭೂತ ಅಗತ್ಯ. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಜಯಚಂದ್ರ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಿಮ್ಮನಹಳ್ಳಿ, ಸಿದ್ದನಕಟ್ಟೆ ಹಾಗೂ ಬೆಳವಾಡಿಡಿ ಗ್ರಾಮದ ಮಹಿಳೆಯರು, ಯುವಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.