ಶಿರಾ: ಬಾಳಾಪುರ ಗ್ರಾಮದ ಸರ್ವೆ ನಂ.147ರಲ್ಲಿ ರಾಣಮ್ಮ ಕೋಂ. ಲೇಟ್ ರಾಜಣ್ಣ ಅವರಿಗೆ ಬಗರ್ಹುಕುಂ ಯೋಜನೆಯಡಿ ಮಂಜೂರಾಗಿರುವ 3 ಎಕರೆ 20 ಗುಂಟೆ ಜಮೀನನ್ನು ಗುರುತಿಸಿ, ಅವರಿಗೆ ಸ್ವಾಧೀನಾನುಭವ ದೊರಕಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಈ ಸಂಬಂಧ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಕೆ.ಎಸ್. ಧನಂಜಯಾರಾಧ್ಯ ಅವರ ನೇತೃತ್ವದಲ್ಲಿ ಶಿರಾ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಗಿದೆ.
ರಾಣಮ್ಮ ಅವರಿಗೆ 1997ರಲ್ಲಿ ಜಮೀನು ಮಂಜೂರಾಗಿದ್ದು, 2025ರವರೆಗೆ ಜಮೀನನ್ನು ಸ್ವಾಧೀನದಲ್ಲಿಟ್ಟುಕೊಂಡು ಅನುಭವಿಸಿಕೊಂಡು ಬಂದಿದ್ದಾರೆ. ಈ ನಡುವೆ ಅವರ ಪುತ್ರನಿಗೆ ಕಿಡ್ನಿ ವೈಫಲ್ಯ ಉಂಟಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ತಮಿಳುನಾಡಿನ ಕೃಷ್ಣಗಿರಿಗೆ ತೆರಳಿದ್ದ ಸಂದರ್ಭದಲ್ಲಿ, ಈರಣ್ಣಗೌಡ ಹಾಗೂ ಅವರ ಕುಟುಂಬಸ್ಥರು ಜಮೀನಿಗೆ ಪ್ರವೇಶಿಸಿ ಕುರಿ ಕೊಟ್ಟಿಗೆ ನಿರ್ಮಿಸಿಕೊಂಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಕುರಿತು ರಾಣಮ್ಮ ಅವರು ಜುಲೈ 6ರಂದು ಜಮೀನಿನ ಸರ್ವೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಜುಲೈ 14ರಂದು ಸರ್ವೆ ಇಲಾಖೆ ಅಧಿಕಾರಿಗಳು, ರೆವಿನ್ಯೂ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದಾಗ ಸರ್ವೆ ಕಾರ್ಯಕ್ಕೆ ಈರಣ್ಣಗೌಡ ಹಾಗೂ ಕುಟುಂಬಸ್ಥರು ಅವಕಾಶ ನೀಡಲಿಲ್ಲ ಎಂದು ರೈತ ಸಂಘ ತಿಳಿಸಿದೆ.
ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದು, ಉಭಯ ಪಕ್ಷಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸ್ಥಳದಲ್ಲಿ ಶಾಂತಿಭಂಗವಾಗದಂತೆ ಕ್ರಮ ಕೈಗೊಳ್ಳುವಂತೆ ಶಿರಾ ಡಿವೈಎಸ್ಪಿ ಅವರು ಸೂಚಿಸಿದ್ದು, ರಾಣಮ್ಮ ಅವರಿಗೆ ಮಂಜೂರಾಗಿರುವ ಜಮೀನನ್ನು ಗುರುತಿಸಿ ಕೊಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆ ಇರುವುದಾಗಿಯೂ ರೈತ ಸಂಘ ತಿಳಿಸಿದೆ.
ಇದೆ ಸಂಧರ್ಭದಲ್ಲಿ ಧನಂಜಯ ಆರಾಧ್ಯ ರೈತ ಸಂಘದ ಜಿಲ್ಲಾಧ್ಯಕ್ಷರು, ಎ ಐ ಬಿ ಎಸ್ ಪಿ ಜಿಲ್ಲಾ ಸಂಯೋಜಕರು ಮಂಜುನಾಥ್ , ನಾಗರಾಜು , ವೀರ ಕ್ಯಾತಯ್ಯ ಎ ಐ ಬಿ ಎಸ್ ಪಿ ತಾಲೂಕು ಅಧ್ಯಕ್ಷರು , ರಂಗಮ್ಮ ಎ ಬಿ ಎಸ್ ಪಿ ತಾಲೂಕು ಮಹಿಳಾ ಉಪಾಧ್ಯಕ್ಷ , ರಮೇಶ್ ಹಾಗೂ ಬುಕ್ಕಾಪಟ್ಟಣದ ಗ್ರಾಮಸ್ಥರು ಸೇರಿದಂತೆ ಹಲವಾರು ಉಪಸ್ಥಿತರಿದ್ದರು