ಶಿರಾ: ನಗರದ ಹೊರವಲಯದ ಗುಮ್ಮನಹಳ್ಳಿ (ವೀರಾಪುರ) ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾಲೂಕು ಆಡಳಿತದ ವತಿಯಿಂದ ಪೊಲೀಸ್ ಬಂದೋಬಸ್ತ್ನಲ್ಲಿ ಕೈಗೊಳ್ಳಲಾಯಿತು.
ಗುಮ್ಮನಹಳ್ಳಿ ಗ್ರಾಮದ ಸರ್ವೆ ನಂ. 79ರಲ್ಲಿ ಒಟ್ಟು 102 ಎಕರೆ ವಿಸ್ತೀರ್ಣದ ಕೆರೆ ಇದ್ದು, ಇದರಲ್ಲಿ ಸುಮಾರು 30 ಎಕರೆ ಜಾಗ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ತಾಲೂಕು ಆಡಳಿತದಿಂದ ಕೆರೆ ಪ್ರದೇಶದ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಒತ್ತುವರಿ ತೆರವಿಗೆ ಯಾರೂ ಮುಂದಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ಆರಂಭಿಸಿದರು.
ಹಳೆಯ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿರುವ ಈ ಕೆರೆ ಪ್ರದೇಶದಲ್ಲಿ ಕೆಲವರು ಮನೆಗಳು, ಅಂಗಡಿ ಮಳಿಗೆಗಳು ಹಾಗೂ ಕುರಿ ರೊಪ್ಪಗಳನ್ನು ನಿರ್ಮಿಸಿಕೊಂಡಿದ್ದರೆ, ಇನ್ನು ಕೆಲವರು ಕೃಷಿ ಚಟುವಟಿಕೆ ನಡೆಸುತ್ತಿರುವುದು ಕಂಡುಬಂದಿದೆ.
ತಹಶೀಲ್ದಾರ್ ಆನಂದಕುಮಾರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ನವ್ಯ ಹಾಗೂ ಕಂದಾಯ ನಿರೀಕ್ಷಕ ಶಿವಕುಮಾರ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ನೊಂದಿಗೆ ತೆರವು ಕಾರ್ಯಾಚರಣೆ ನಡೆಯಿತು. ಈ ವೇಳೆ ಅಂಗಡಿಯಲ್ಲಿದ್ದ ಸಿಮೆಂಟ್ನ್ನು ಬೇರೆಡೆಗೆ ಸಾಗಿಸಲು ಕಾಲಾವಕಾಶ ನೀಡುವಂತೆ ಕೆಲವರು ಅಧಿಕಾರಿಗಳಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಅವರಿಗೆ ಸ್ವಲ್ಪ ಸಮಯಾವಕಾಶ ನೀಡಿ, ಇತರೆ ಭಾಗಗಳಲ್ಲಿ ತೆರವು ಕಾರ್ಯಾಚರಣೆ ಮುಂದುವರಿಸಿದರು.