ಪಾವಗಡ: ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ಯುವಕ ಸೇರಿದಂತೆ ಕುಟುಂಬದ ಸದಸ್ಯರ ಮೇಲೆ ಕಟ್ಟಿಗೆ, ಕಲ್ಲು ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಸೆ.27ರಂದು ನಾಗಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಯಿಂದ ಗಾಯಗೊಂಡ ಶ್ರೀನಿವಾಸ (22) ಸೇರಿದಂತೆ ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶ್ರೀನಿವಾಸ ನೀಡಿದ ದೂರಿನ ಪ್ರಕಾರ, ಮಲ್ಲಿಕಾರ್ಜುನ ಎಂಬಾತ ಕಟ್ಟಿಗೆ ಪಟ್ಟಿಯಿಂದ ತಲೆಗೆ ಹೊಡೆದ ಪರಿಣಾಮ ಗಂಭೀರ ಗಾಯವಾಗಿದ್ದು, 7 ಹೊಲಿಗೆ ಹಾಕಲಾಗಿದೆ. ಮತ್ತಿತರರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.