ಶಿರಾ: ಅಪ್ಪರ ಭದ್ರಾ ಯೋಜನೆಯ ತುಮಕೂರು ನಾಲೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ, ಶಿರಾ ತಾಲ್ಲೂಕಿಗೆ ಹಂಚಿಕೆಯಾಗಿರುವ ಎಲ್ಲಾ 63 ಕೆರೆಗಳಿಗೆ ನೀರು ಹರಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು. ರೈತರ ಸಂಕಷ್ಟದ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿಸಲು ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು 5300 ಕೋಟಿ ಅನುದಾನ ತಕ್ಷಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ, ಕನಕ ಬ್ಯಾಂಕ್ ಅಧ್ಯಕ್ಷ, ನಾರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮನವಿ ಮಾಡಿದರು.
ಶಿರಾ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಮಾತನಾಡಿ, ಭದ್ರಾ ಯೋಜನೆ ಶಿರಾ ತಾಲ್ಲೂಕಿನ ಪಾಲಿಗೆ ಕೇವಲ ಒಂದು ನೀರಾವರಿ ಯೋಜನೆಯಲ್ಲ. ಪದೇಪದೇ ಬರಗಾಲ ಎದುರಿಸುವ ಈ ಪ್ರದೇಶದಲ್ಲಿ ಕೆರೆಗಳ ಪುನಶ್ಚೇತನ, ಅಂತರ್ಜಲ ಮಟ್ಟ ಹೆಚ್ಚಳ, ಕುಡಿಯುವ ನೀರಿನ ಭದ್ರತೆ ಹಾಗೂ ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಅತ್ಯಂತ ಮಹತ್ವದ ಜೀವನಾಡಿ ಯೋಜನೆಯಾಗಿದೆ.
ಈಗಾಗಲೇ ಚಿತ್ರದುರ್ಗ ನಾಲಾ ಕಾಮಗಾರಿ ಪೂರ್ಣಗೊಂಡ ಕಾರಣ ಚಿತ್ರದುರ್ಗ ಜಿಲ್ಲೆಗೆ ನೀರು ಸಿಕ್ಕಿದೆ, ಅದೇ ರೀತಿ ತುಮಕೂರು ನಾಲೆ ಕಾಮಗಾರಿ ವಿಳಂಬವಾಗುತ್ತಿರುವ ಕಾರಣ ನಮ್ಮ ಜಿಲ್ಲೆ ಸೇರಿದಂತೆ ಶಿರಾಕ್ಕೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ಶಿರಾ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ ಆದರೆ ಯಾವುದೇ ಬರಪೂರ ಕಾಮಗಾರಿಗಳನ್ನು ಕೈಗೊಳ್ಳದ ಕಾರಣ ರೈತ ಸಂಕಷ್ಟದಲ್ಲಿದ್ದು, ತಕ್ಷಣ ಸರ್ಕಾರ ರೈತರಿಗೆ ಬೆಳೆ ನಷ್ಟ ಪರಿಹಾರ ಘೋಷಣೆ ಮಾಡಬೇಕು. ಪ್ರತಿ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳುತ್ತಿದ್ದು ತಕ್ಷಣ ತಾಲೂಕು ಆಡಳಿತ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳುವುದರ ಜೊತೆಗೆ, ಜಾನುವಾರಗಳ ಹಿತ ಕಾಪಡಲು ತಕ್ಷಣ ಗೋಶಾಲೆಗಳನ್ನು ಪ್ರಾರಂಭಿಸುವಂತೆ ಆಗ್ರಹ ಪಡಿಸಿದರು.