ತುಮಕೂರು: ಗುರುವಾರ ಸಂಜೆ ತುಮಕೂರು ನಗರದಲ್ಲಿ ಆರಂಭವಾದ ಮಳೆ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದ್ದು, ಸತತ ಮೂರು ಗಂಟೆ ಮಳೆ ಸುರಿದು ಈಗಲೂ ಸಹ ಮಳೆ ಸಾಧಾರಣವಾಗಿ ಬರುತ್ತಲೇ ಇದೆ. ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ವ್ಯತ್ಯಯವಾಗಿದೆ. ಪ್ರಮುಖವಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತು ತುಮಕೂರಿನ ನಗರ ಭಾಗಗಳಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರು ಭಾರಿ ಸಂಕಷ್ಟ ಎದುರಿಸುತ್ತಿದ್ದಾರೆ.
ನಿರಂತರ ಮಳೆಯಿಂದಾಗಿ ತುಮಕೂರು ಮುಖ್ಯ ರಸ್ತೆ, ಅಂಡರ್ಪಾಸ್ಗಳು ಮತ್ತು ಸರ್ವಿಸ್ ರಸ್ತೆಗಳು ಹೊಳೆಯಂತಾಗಿವೆ. ಕೋತಿತೋಪು ಕೆಇಬಿ ಸರ್ಕಲ್ನಲ್ಲಿ ಮೊಣಕಾಲುದ್ದ ನೀರು ಹರಿದು ಭಾರೀ ಫಜೀತಿ ಉಂಟಾಗಿತ್ತು.
ಹಬ್ಬದ ರಜೆ ಹಾಗೂ ಮಳೆಯ ಕಾರಣದಿಂದಾಗಿ ಗೊರಗುಂಟೆಪಾಳ್ಯ, ಯಶವಂತಪುರ ಮತ್ತು ನೆಲಮಂಗಲದಿಂದ ತುಮಕೂರಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವಂತಾಗಿದೆ.
ತುಮಕೂರು ನಗರದ ಕೇಂದ್ರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣಕ್ಕೆ ಮಳೆ ನೀರು ದಾಳಿ ಇಕ್ಕಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಇನ್ನೂ ಐದು ದಿನ ವಿಪರೀತ ಮಳೆಯ ಹವಾಮಾನ ವರದಿ ನೀಡಲಾಗಿದ್ದು, ಭಾಗಶಃ ತುಮಕೂರು ನಗರವೂ ಸಹ ಇನ್ನೂ ಮೂರ್ನಾಲ್ಕು ದಿನ ಮಳೆಯಲ್ಲಿ ತೋಯಲಿದೆ.