ಬೆಂಗಳೂರು: ಕರ್ನಾಟಕ ಒಲಿಂಪಿಕ್ ಸಂಸ್ಥೆ ನಡೆಸಿದ ಸುದೀರ್ಘ ಪರಿಶ್ರಮಕ್ಕೆ ಜಯ ದೊರಕಿದ್ದು, ಕ್ರೀಡಾಪಟುಗಳಿಗೆ ವೃತ್ತಿ ಭದ್ರತೆ ಗ್ಯಾರಂಟಿ ನೀಡಲು ರಾಜ್ಯ ಸರ್ಕಾರದ ಸಿವಿಲ್ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಶೇಕಡಾ 2ರಷ್ಟು ಮತ್ತು ಪೊಲೀಸ್ ಹಾಗೂ ಅರಣ್ಯ ಇಲಾಖೆಗಳಲ್ಲಿ ಶೇಕಡಾ 3ರಷ್ಟು ಮೀಸಲಾತಿ ಕಲ್ಪಿಸಿ ಅಧಿಕೃತ ಆದೇಶ ಜಾರಿ ಮಾಡಿದೆ.
ಕೆಒಎ ಕೆಲವಾರು ವರ್ಷಗಳಿಂದ ಈ ವಿಚಾರವನ್ನು ಸರ್ಕಾರದ ಮುಂದೆ ಮಂಡಿಸುತ್ತಾ ಬಂದಿತ್ತು. ಕರ್ನಾಟಕ ನಾಗರಿಕ ಸೇವಾ ನೇಮಕಾತಿ ತಿದ್ದುಪಡಿ ನಿಯಮಗಳು-2026ಕ್ಕೆ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ಸೂಚಿಸಲಾಗಿತ್ತು. ಇದೀಗ ಆದೇಶ ಹೊರಬಿದ್ದಿದ್ದು, ಕ್ರೀಡಾ ಲೋಕದಲ್ಲಿ ಹರ್ಷ ಮೂಡಿಸಿದೆ.
ಕ್ರೀಡಾಪಟುಗಳಿಗೆ ಹೊಸ ಆಶಾಕಿರಣವಾದ ಈ ನಿರ್ಧಾರಕ್ಕೆ ಕಾರಣರಾದ ಸಿಎಂ, ಉಪಮುಖ್ಯಮಂತ್ರಿ, ಕ್ರೀಡಾ ಸಚಿವರು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿ ವರ್ಗದವರಿಗೆ ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಧನ್ಯವಾದಗಳನ್ನು ತಿಳಿಸಿದ್ದು, ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿ ಕ್ರೀಡಾಕೋಟಾಕ್ಕಾಗಿ ಕಾಯುತ್ತಿದ್ದ ರಾಜ್ಯದ ಕ್ರೀಡಾಪಟುಗಳಿಗೆ ಬಹುದೊಡ್ಡ ಬೆಂಬಲ ಸಿಕ್ಕಂತಾಗಿದೆ.