ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
ತುರುವೇಕೆರೆ: ಜಾತ್ಯಾತೀತ ಜನತಾದಳ ಅಥವಾ ಎನ್.ಡಿ.ಎ. ಮೈತ್ರಿ ಕೂಟದಿಂದ ತಾಲ್ಲೂಕಿನ ದಬ್ಬೇಘಟ್ಟ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಒಕ್ಕಲಿಗ ಸಮುದಾಯಕ್ಕೆ ಸೇರಿದ ವಿಠಲದೇವರಹಳ್ಳಿಯ ಹರೀಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಪ್ರಸ್ತುತ ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿರುವ ವಿಠಲದೇವರಹಳ್ಳಿಯ ಹರೀಶ್ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನೇ ಆರಾಧ್ಯ ದೈವವೆಂದು ಭಾವಿಸಿ ಜಾತ್ಯಾತೀತ ಜನತಾದಳ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧರಾಗಿ, ಪಕ್ಷದ ಕಟ್ಟಾ ಬೆಂಬಲಿಗ ಹಾಗೂ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆ ಹಾಗೂ ಅಭಿವೃದ್ದಿಗಾಗಿ ದುಡಿಯುತ್ತಿದ್ದಾರೆ. ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಮನೆಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆ. ಎಂ.ಟಿ.ಕೃಷ್ಣಪ್ಪನವರ ಬೆಂಬಲಿಗನಾಗಿ ಗುರುತಿಸಿಕೊಂಡಿರುವ ಹರೀಶ್, ವಿಧಾನಸಭಾ ಚುನಾವಣೆಗಳಲ್ಲಿ ಎಂ.ಟಿ.ಕೃಷ್ಣಪ್ಪನವರ ಪರವಾಗಿ ಹಗಲಿರುಳೆನ್ನದೆ ಪ್ರಚಾರ ನಡೆಸಿ ಕೃಷ್ಣಪ್ಪನವರ ಗೆಲುವಿಗೆ ಶ್ರಮಿಸಿದ್ದಾರೆ.
ತುರುವೇಕೆರೆ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದು, ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಯುವ ಸಮೂಹವನ್ನು ಸೇರ್ಪಡೆಗೊಳಿಸುತ್ತಾ ಪಕ್ಷದ ಬಲವರ್ಧನೆಗೆ ದುಡಿಯುತ್ತಿದ್ದಾರೆ. ಈವರೆಗೆ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪಕ್ಷನಿಷ್ಠವಾಗಿ ಮಾಡುತ್ತಾ ಬಂದಿರುವ ಹರೀಶ್ ಅವರು ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಒಕ್ಕಲಿಗರೇ ಹೆಚ್ಚಾಗಿರುವ ದಬ್ಬೇಘಟ್ಟ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದಾರೆ.
ಮುಂಬರುವ ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಜೆಡಿಎಸ್ ಹಾಗೂ ಬಿಜೆಪಿ ಒಗ್ಗೂಡಿ ಎನ್.ಡಿ.ಎ. ಮೈತ್ರಿಕೂಟದ ಮೂಲಕ ಎದುರಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ವಿಠಲದೇವರಹಳ್ಳಿ ಹರೀಶ್ ಅವರು ಜೆಡಿಎಸ್ ಪಕ್ಷದಿಂದಾಗಲೀ ಅಥವಾ ಎನ್.ಡಿ.ಎ. ಮೈತ್ರಿಕೂಟದಿಂದಾಗಲೀ ಶತಾಯಗತಾಯ ದಬ್ಬೇಘಟ್ಟ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿ ಈಗಾಗಲೇ ಕ್ಷೇತ್ರದಾದ್ಯಂತ ಒಂದು ಸುತ್ತಿನ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯ ದೇವಾಲಯ ಜೀರ್ಣೋದ್ದಾರಕ್ಕೆ ನೆರವು, ಕ್ರೀಡೆಗೆ ಬಹುಮಾನ, ನಾಟಕಗಳಿಗೆ ಸಹಾಯಧನ ಸೇರಿದಂತೆ ಹತ್ತಾರು ಜನಪರ ಕಾರ್ಯಚಟುವಟಿಕೆ ನಡೆಸುತ್ತಾ ಜನರ ಮನಗೆಲ್ಲಲು ಮುಂದಾಗಿದ್ದಾರೆ.
ಈ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ವಿಠಲದೇವರಹಳ್ಳಿ ಹರೀಶ್, ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರೈತಪರ ಹೋರಾಟ, ಜನಪರ ಕಾಳಜಿ ಮೆಚ್ಚಿ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ನಾಯಕರಾದ ಶಾಸಕ ಎಂ.ಟಿ.ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆಗೆ ದುಡಿದಿದ್ದೇನೆ. ಪಕ್ಷದ ವರಿಷ್ಠರು ನನ್ನ ಪಕ್ಷನಿಷ್ಠೆ ಗುರುತಿಸಿ, ನನ್ನ ಮೇಲೆ ಭರವಸೆ ಇಟ್ಟು ದಬ್ಬೇಘಟ್ಟ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಡುತ್ತಾರೆಂಬ ನಂಬಿಕೆ ನನಗಿದೆ. ಅಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ವಿಶ್ವಾಸ ನನಗಿದೆ ಎಂದರು.