- ಚೇತನ್ ಜಿ ಜಾನಕಲ್
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಅಜ್ಜಿಗುಡ್ಡೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ವಿಧವೆ ಹಾಗೂ ಅವರ ಅಪ್ರಾಪ್ತ ಪುತ್ರಿ ಅಪಾಯಕಾರಿ ಶಿಥಿಲ ಮನೆಯಲ್ಲಿ ವಾಸಿಸುತ್ತಿರುವುದು ಬೆಳಕಿಗೆ ಬಂದಿದ್ದು, ಕುಟುಂಬಕ್ಕೆ ತುರ್ತು ವಸತಿ ಹಾಗೂ ಅಗತ್ಯ ಸರ್ಕಾರಿ ಸೌಲಭ್ಯ ಕಲ್ಪಿಸುವಂತೆ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.
ಅಕ್ಟೋಬರ್ 5ರಂದು ಅಜ್ಜಿಗುಡ್ಡೆ ಗ್ರಾಮಕ್ಕೆ ಭೇಟಿ ನೀಡಿದ್ದ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಗ್ರಾಮದಲ್ಲಿನ ಕುಟುಂಬಗಳ ಸಾಮಾಜಿಕ, ಆರ್ಥಿಕ ಮತ್ತು ವಸತಿ ಪರಿಸ್ಥಿತಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಜಯಮ್ಮ (47) ಅವರ ಕುಟುಂಬದ ದುಸ್ಥಿತಿ ಗಮನಕ್ಕೆ ಬಂದಿದೆ.
ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದ ಜಯಮ್ಮ ಅವರು ವಿಧವೆಯಾಗಿದ್ದು, ಪತಿ ನರಸಿಂಹಯ್ಯ ಅವರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಪ್ರಸ್ತುತ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಜಯಮ್ಮ ಅವರು ಅನಾರೋಗ್ಯದಿಂದಲೂ ಬಳಲುತ್ತಿದ್ದು, ಮಗಳು ಅಮೂಲ್ಯಳ ಶಿಕ್ಷಣ ಹಾಗೂ ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ. ತಂದೆಯನ್ನು ಕಳೆದುಕೊಂಡಿರುವ ಅಮೂಲ್ಯ ಅಜ್ಜಿಗುಡ್ಡೆ ಸರ್ಕಾರಿ ಶಾಲೆಯಲ್ಲಿ ಪ್ರಥಮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಕುಟುಂಬ ವಾಸಿಸುತ್ತಿರುವ ಮನೆಯ ಒಂದು ಗೋಡೆ ಈಗಾಗಲೇ ಕುಸಿದಿದ್ದು, ಉಳಿದ ಭಾಗವೂ ಶಿಥಿಲಗೊಂಡಿರುವುದರಿಂದ ಮಳೆ–ಗಾಳಿಯ ಸಂದರ್ಭದಲ್ಲಿ ಮನೆ ಕುಸಿಯುವ ಆತಂಕವಿದೆ. ಅಪ್ರಾಪ್ತ ಬಾಲಕಿ ಮನೆಯಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದ ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ತಾತ್ಕಾಲಿಕ ಸುರಕ್ಷಿತ ಆಶ್ರಯ ಕಲ್ಪಿಸಬೇಕು. ಕುಟುಂಬದ ಅರ್ಹತೆಯನ್ನು ಪರಿಗಣಿಸಿ ಸರ್ಕಾರಿ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಬೇಕು ಎಂದು ಟ್ರಸ್ಟ್‌ನ ಅಧ್ಯಕ್ಷ ತೇಜಾ ಡಿ.ಎಸ್. ಒತ್ತಾಯಿಸಿದ್ದಾರೆ.
ಜಯಮ್ಮ ಅವರಿಗೆ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳು ಹಾಗೂ ಇತರ ಸರ್ಕಾರಿ ಯೋಜನೆಗಳ ನೆರವು ಕಲ್ಪಿಸುವುದರ ಜೊತೆಗೆ, ಅಪ್ರಾಪ್ತ ಬಾಲಕಿ ಅಮೂಲ್ಯಳಿಗೆ ಶಿಕ್ಷಣ, ಪೌಷ್ಟಿಕತೆ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವಂತೆ ಪ್ರಧಾನ ಕಾರ್ಯದರ್ಶಿ ಶಾಂತರಾಜು ಡಿ. ಮನವಿ ಮಾಡಿದ್ದಾರೆ.
ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮನ್ವಯದಿಂದ ತುರ್ತು ಕ್ರಮ ಕೈಗೊಂಡು ಕುಟುಂಬಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ಟ್ರಸ್ಟ್‌ನ ಉಪಾಧ್ಯಕ್ಷ ಗುರುಮೂರ್ತಿ, ಸದಸ್ಯರಾದ ನಿರ್ಮಲ, ವಿದ್ಯಾರ್ಥಿ ಲಲಿತ ಹಾಗೂ ಕಾನೂನು ವಿದ್ಯಾರ್ಥಿ ದೇವರಾಜು ಆರ್. ಆಗ್ರಹಿಸಿದ್ದಾರೆ.