ತುಮಕೂರು: ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು ಕಳೆದ ೧೫ ವ?ಗಳ ಹಿಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತುಮಕೂರು ನಗರ ವ್ಯಾಪ್ತಿಯಲ್ಲಿ ಆರಂಭಿಸಿದ್ದ ಸಿದ್ದಗಂಗಾ ನಗರ ಸಾರಿಗೆ ಹೆಸರಿನ ನಗರ ಸಾರಿಗೆ ಬಸ್ಗಳ ಮೇಲಿದ್ದ ಸಿದ್ಧಗಂಗಾ ಹೆಸರು ನಾಪತ್ತೆಯಾಗಿದೆ ಎಂದು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ಹೇಳಿದ್ದಾರೆ.
ಸಿದ್ದಗಂಗಾ ನಗರ ಸಾರಿಗೆ ಇಲ್ಲಿಯವರೆಗೂ ಲಾಭದಾಯಕವಾಗಿಯೇ ನಗರ ಸಾರಿಗೆ ಸಂಸ್ಥೆ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಕ? ನಗರ ಸಾರಿಗೆ ಬಸ್ಸುಗಳ ಮೇಲೆ ಸಿದ್ದಗಂಗಾ ಹೆಸರನ್ನ ತೆರವುಗೊಳಿಸಲಾಗಿದೆ. ಸಾರಿಗೆ ಸಂಸ್ಥೆಯ ಈ ನಡೆಯನ್ನು ನಮ್ಮ ಸಂಸ್ಥೆ ಉಗ್ರವಾಗಿ ಖಂಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಅಧಿಕೃತ ಡಾ. ಶಿವಕುಮಾರ ಸ್ವಾಮೀಜಿ ರಸ್ತೆಯ ಹೆಸರನ್ನು ಜಿಲ್ಲಾಡಳಿತ, ಆಡಳಿತಾತ್ಮಕವಾಗಿ, ಅಧಿಕೃತವಾಗಿ ದಾಖಲೆಗಳಲ್ಲಿ ಬಳಸದೆ ನಿರ್ಲಕ್ಷಿಸಿರುವ ಸಂದರ್ಭದಲ್ಲಿ, ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಶ್ರೀ ಶಿವಕುಮಾರ ಸ್ವಾಮೀಜಿ ಸ್ಕ್ವೇರ್ ಅಂತ ಹೆಸರನ್ನು ಇಡಲೇಬೇಕೆಂದು ಹೋರಾಟಗಳು ಆರಂಭವಾಗಿರುವ ಸಂದರ್ಭದಲ್ಲಿ ನಗರ ಸಾರಿಗೆ ಬಸ್ಗಳ ಮೇಲೆ ಸಿದ್ಧಗಂಗಾ ಹೆಸರು ಕೈಬಿಟ್ಟಿರುವುದರ ಹಿಂದೆ ಪ್ರಭಾವಿ ಹಾಗೂ ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನಗಳಿವೆ ಎಂದು ಜಿ.ಎಸ್. ಬಸವರಾಜು ಹೇಳಿದ್ದಾರೆ.
ತುಮಕೂರಿನವರೇ ಆದ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದು ತುರ್ತಾಗಿ ಈ ಬಗ್ಗೆ ಗಮನಹರಿಸಿ ಆಗಿರುವಂತಹ ಲೋಪವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶದ ಉದ್ದಗಲದಲ್ಲಿ ಸಿದ್ದಗಂಗಾ ಹೆಸರಿಗೆ ನತಮಸ್ತಕರಾಗಿ, ಗೌರವಪೂರ್ಣವಾಗಿ, ಧನ್ಯತಾಭಾವದಿಂದ ಕೋಟ್ಯಾಂತರ ಆಸ್ತಿಕ ಬಂಧುಗಳು ನಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಪೂಜ್ಯರ ಕರ್ಮಭೂಮಿ, ಸ್ವಕ್ಷೇತ್ರದಲ್ಲಿಯೇ ರಾಜ್ಯ ಸಾರಿಗೆ ಸಂಸ್ಥೆಯಿಂದ ಇಂತಹ ಅಪಮಾನ ಹಾಗೂ ಅಪಚಾರ ಸಹಿಸುವುದು ಸಾಧ್ಯವೇ ಇಲ್ಲ. ಸಾರಿಗೆ ಸಂಸ್ಥೆ ಎಚ್ಚೆತ್ತುಕೊಂಡು ಆಗಿರುವ ಲೋಪವನ್ನು ಸರಿಪಡಿಸಿ, ಸಿದ್ಧಗಂಗಾ ಹೆಸರಿಗೆ ಯಾವುದೇ ಚ್ಯುತಿ ಬಾರದಂತೆ, ಗೌರವ ಪೂರ್ವಕವಾಗಿ ನಡೆದುಕೊಳ್ಳದೆ ಹೋದರೆ ಸಾರಿಗೆ ಸಂಸ್ಥೆಗೆ ಘರಾವ್ ಹಾಕುವುದು ಅನಿವಾರ್ಯ ಎಂದು ಹೇಳಿದ್ದಾರೆ.