ಪಾವಗಡ: ತಾಲೂಕಿನ ವೈನ್ ಹೊಸಕೋಟೆ ಹೋಬಳಿ ವ್ಯಾಪ್ತಿಯ ಆರ್.ಡಿ. ರೊಪ್ಪ ಗ್ರಾಮದ ನಿವಾಸಿ ಗೋಪಾಲ (57) ಎಂಬುವರು ಉತ್ತರಖಂಡದ ಕೇದಾರನಾಥದಲ್ಲಿ ನಿನ್ನೆ ರಾತ್ರಿ ಅಕಾಲಿಕವಾಗಿ ಮರಣ ಹೊಂದಿದ್ದಾರೆ.
ಕಳೆದ ತಿಂಗಳು ಗಣೇಶ ಚತುರ್ಥಿ ಹಬ್ಬದ ಶುಭ ಸಂದರ್ಭದಲ್ಲಿ ಗೋಪಾಲ, ಅವರ ಧರ್ಮಪತ್ನಿ ರೇಣುಕಮ್ಮ ಹಾಗೂ ಶ್ರೀರಂಗಪುರ ಗ್ರಾಮದ ಸ್ನೇಹಿತರು ಸೇರಿ ಉತ್ತರ ಪ್ರದೇಶದ ಕಾಶಿ, ಅಯೋಧ್ಯೆ ಸೇರಿದಂತೆ ದೇಶದ ವಿವಿಧ ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ಪ್ರವಾಸ ತೆರಳಿದ್ದರು. ಹಲವು ಪ್ರಸಿದ್ಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಕೇದಾರನಾಥ ಧಾಮಕ್ಕೆ ತೆರಳಿದ್ದ ವೇಳೆ ನಿನ್ನೆ ರಾತ್ರಿ ಗೋಪಾಲ ಅವರ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಮೃತ ಗೋಪಾಲ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸದ್ಯ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಕೇದಾರನಾಥದಿಂದ ಮೃತದೇಹವನ್ನು ಹುಟ್ಟೂರಾದ ಪಾವಗಡದ ಆರ್.ಡಿ. ರೊಪ್ಪ ಗ್ರಾಮಕ್ಕೆ ತರುವುದು ಹೇಗೆ ಎಂಬುದು ತಿಳಿಯದೆ ಕುಟುಂಬಸ್ಥರು ಮತ್ತು ಸಂಬಂಧಿಕರು ತೀವ್ರ ಗೊಂದಲ ಹಾಗೂ ದುಃಖದಲ್ಲಿದ್ದಾರೆ.
ಸಾಮಾನ್ಯ ಕುಟುಂಬದವರಾಗಿರುವ ಮೃತರ ಕುಟುಂಬಕ್ಕೆ ಬೃಹತ್ ವೆಚ್ಚ ಭರಿಸಿ ಮೃತದೇಹವನ್ನು ತರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯು ತಕ್ಷಣವೇ ಸ್ಪಂದಿಸಿ, ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ಸ್ವಗ್ರಾಮಕ್ಕೆ ತರಲು ಅಗತ್ಯ ನೆರವು ನೀಡಬೇಕೆಂದು ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.