ಶಿರಾ: ನಮ್ಮ ನಾಡಿನ ಇತಿಹಾಸ, ತ್ಯಾಗ ಮತ್ತು ಕೆಚ್ಚೆದೆಯ ಶೌರ್ಯದ ಸಂಕೇತವಾಗಿರುವ ವೀರಗಲ್ಲುಗಳು ಹಾಗೂ ಪ್ರಾಚೀನ ಶಾಸನಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರು ಹಾಗೂ ಸಂಶೋಧನ ವಿದ್ಯಾರ್ಥಿಯಾದ ಮಹಾಲಿಂಗೇಗೌಡ ಜಿ. ತಿಳಿಸಿದರು.
ಅವರು ತಾಲೂಕಿನ ಕೊಟ್ಟ ಗ್ರಾಮದ ಜಯಣ್ಣನವರ ಜಮೀನಿನಲ್ಲಿ ನೆಲೆಗೊಂಡಿರುವ ಐತಿಹಾಸಿಕ ವೀರಗಲ್ಲುಗಳ ಬಳಿ ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ ಪರಂಪರೆ ಉಳಿಸಿ ಜಾಗೃತಿ ಹಾಗೂ ಕ್ಷೇತ್ರ ಅಧ್ಯಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಊರು, ಹೆಣ್ಣು ಅಥವಾ ಗೋವುಗಳ ರಕ್ಷಣೆಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರರ ನೆನಪಿನಲ್ಲಿ ಸ್ಥಾಪಿಸಲಾದ ಈ ವೀರಗಲ್ಲುಗಳು ನಮ್ಮ ಇತಿಹಾಸದ ಜೀವಂತ ಸಾಕ್ಷಿಗಳು. ಬಯಲು ಪ್ರದೇಶಗಳಲ್ಲಿರುವ ಇಂತಹ ಅಮೂಲ್ಯ ಸ್ಮಾರಕಗಳು ಕಾಲದ ಹೊಡೆತಕ್ಕೆ ಹಾಗೂ ನಿರ್ಲಕ್ಷ್ಯಕ್ಕೆ ಸಿಲುಕಿ ನಾಶವಾಗದಂತೆ ಸೂಕ್ತ ರಕ್ಷಣೆ ನೀಡುವುದು ಮತ್ತು ಇವುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ ಎಂದು ಹೇಳಿದರು.