ಕೋಲಾರ: ಕೆಜಿಫ್ ಬೇತಮಂಗಲದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯಂದು ರಾಜ್ಯಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ 'ಡ್ರೈ ಡೇ' ಎಂದು ಘೋಷಿಸಲಾಗಿದ್ದರೂ, ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಘಟನೆ ಬೇತಮಂಗಲದಲ್ಲಿ ಬೆಳಕಿಗೆ ಬಂದಿದೆ.
ಹಣದ ದುರಾಸೆಗೆ ಬಿದ್ದು ಗಾಂಧೀಜಿಯವರ ತತ್ತ್ವ ಹಾಗೂ ಆಶಯಗಳಿಗೆ ಅಪಮಾನ ಬಗೆಯುತ್ತಿದ್ದ ಬೇತಮಂಗಲದ ‘ವಿಜಯ ಬಾರ್’ ಕ್ಯಾಶಿಯರ್ ನರಸಿಂಹ ಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧವಿದ್ದರೂ, ವಿಜಯ ಬಾರ್ನಲ್ಲಿ ಕದ್ದುಮುಚ್ಚಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಜಾಗೃತರಾದ ಬೇತಮಂಗಲ ಸಬ್ಇನ್ಸ್ಪೆಕ್ಟರ್ ತ್ಯಾಗರಾಜ್ ಅವರ ನೇತೃತ್ವದ ಪೊಲೀಸ್ ಸಿಬ್ಬಂದಿ ತಂಡ ಬಾರ್ ಮೇಲೆ ದಿಢೀರ್ ದಾಳಿ ನಡೆಸಿದೆ.
ದಾಳಿಯ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ನರಸಿಂಹ ಮೂರ್ತಿಯನ್ನು ಹೆಡೆಮುರಿಕಟ್ಟಿ ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ಸುಮಾರು 5 ಲೀಟರ್ ಮದ್ಯವನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಅಕ್ರಮ ಮಾರಾಟಗಾರರಿಗೆ ಎಸ್ಐ ಎಚ್ಚರಿಕೆ:
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಐ ತ್ಯಾಗರಾಜ್ ಅವರು, ಮಹಾತ್ಮಾ ಗಾಂಧಿ ಜಯಂತಿ ಹಾಗೂ ಇತರ ರಾಷ್ಟ್ರೀಯ ಹಬ್ಬಗಳಂದು ಸರ್ಕಾರಿ ಆದೇಶದಂತೆ ಮದ್ಯ ಮಾರಾಟ ಸಂಪೂರ್ಣ ನಿಷೇಧವಿರುತ್ತದೆ. ಇಂತಹ ಪವಿತ್ರ ದಿನಗಳಲ್ಲಿ ಹಣದಾಸೆಗೆ ಬಿದ್ದು ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಇನ್ಮುಂದೆ ಯಾರಾದರೂ ಇಂತಹ ಕೃತ್ಯಗಳಲ್ಲಿ ತೊಡಗಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಅಲ್ಲದೆ, ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ಮಾರಾಟ ಅಥವಾ ಸಾಗಾಣಿಕೆ ಕಂಡುಬಂದರೆ ಸಾರ್ವಜನಿಕರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.