ವರದಿ ಚೇತನ್ ಜಿ ಜಾನಕಲ್
ಚಿಕ್ಕನಾಯಕನಹಳ್ಳಿ: ವಿಶೇಷ ಚೇತನತೆ, ಬಡತನದ ನಡುವೆ ಮಳೆ ನೀರು ಮನೆಗೆ ನುಗ್ಗಿ ಸಂಕಷ್ಟಕ್ಕೆ ಸಿಲುಕಿರುವ ಕಂಪನಹಳ್ಳಿ ಗ್ರಾಮದ ಮೈದಿನಾಬಿ ಅವರ ನೆರವಿಗೆ ತಹಶೀಲ್ದಾರ್ ಮಮತಾ ಅವರು ಸ್ಪಂದಿಸಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂಪನಹಳ್ಳಿ ಗ್ರಾಮದ ವಿಶೇಷ ಚೇತನ ಮಹಿಳೆ ಮೈದಿನಾಬಿ ಅವರ ಮನೆಗೆ ಮಳೆ ನೀರು ನುಗ್ಗಿ, ದಿನಬಳಕೆಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳು ಹಾಳಾಗಿವೆ. ಇದರಿಂದ ಮಹಿಳೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ವಿಷಯ ತಿಳಿದ ತಹಶೀಲ್ದಾರ್ ಮಮತಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತ ಮಹಿಳೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮಹಿಳೆಯ ಸಂಕಷ್ಟವನ್ನು ಆಲಿಸಿ ಸಾಂತ್ವನ ಹೇಳಿದ ಅವರು, ನಾಳೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ತಹಶೀಲ್ದಾರ್ ಅವರ ಭೇಟಿ ಹಾಗೂ ಪರಿಹಾರದ ಭರವಸೆ ಸಂತ್ರಸ್ತ ಮಹಿಳೆಗೆ ಕೊಂಚ ನೆಮ್ಮದಿ ತಂದಿದೆ. ಆದರೆ, ಮಳೆ ನೀರು ಮತ್ತೆ ಮನೆಗೆ ನುಗ್ಗದಂತೆ ತಡೆಯಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದರ ಜೊತೆಗೆ, ತಹಶೀಲ್ದಾರ್ ಮಮತಾ ಅವರು ನೀಡಿರುವ ಭರವಸೆಯಂತೆ ವಿಶೇಷ ಚೇತನ ಮಹಿಳೆಗೆ ಶೀಘ್ರ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ