ಪುಣೆ: ಭವಿಷ್ಯದಲ್ಲಿ ನಡೆಲಿರುವ ದೇಶದ ಪ್ರಮುಖ ಚುನಾವಣಾ ಫಲಿತಾಂಶಗಳು ಪೂರ್ವನಿರ್ಧರಿತವಾಗಿವೆಯೇ...? ಇಂಥದ್ದೊಂದು ಪ್ರಶ್ನೆಯನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಎತ್ತಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಚುನಾವಣೆಯಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಅರ್ಥಹೀನ ಎಂಬ ತಮ್ಮ ಅಭಿಪ್ರಾಯದೊಂದಿಗೆ ಅಭಿಜೀತ್ ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ.
ಮುಂಬೈನಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಗ್ಗಟ್ಟು ಪ್ರದರ್ಶಿಸಲು ಪುಣೆಗೆ ಭೇಟಿ ನೀಡಿದ್ದ ವೇಳೆ ದೀಪ್ಕೆ ಸುದ್ದಿಗಾರರೊಂದಿಗೆ ಮಾತನಾಡಿ ಈ ಗಂಭೀರ ಆರೋಪ ಮಾಡಿತ್ತಾ, ಎನ್‌ಡಿಎ ಪರವಾದ ಶಕ್ತಿ ಉತ್ತುಂಗದಲ್ಲಿದ್ದಾಗಲೂ ಬಿಜೆಪಿ ಗೆಲುವು ಸಾಧಿಸದ ರಾಜ್ಯಗಳಲ್ಲಿ ಈಗ ಸುಲಭದ ಗೆಲುವು ಲಭಿಸುತ್ತಿದೆ ಎಂಬುದೇ ಯೋಚಿಸಬೇಕಾದ ವಿಚಾರ ಎಂಬ ಹೇಳಿಕೆ ನೀಡಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ಕುರಿತು ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಚುನಾವಣಾ ಆಯೋಗದ ವಿರುದ್ಧ ಪ್ರಶ್ನೆಗಳನ್ನು ಎತ್ತುತ್ತಿವೆ. ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ತಡೆಯಲು ಎಸ್‌ಐಆರ್ ಅಗತ್ಯ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದ್ದರೆ, ಪ್ರಕ್ರಿಯೆಯ ನೆಪದಲ್ಲಿ ಅರ್ಹ ಮತದಾರರ ಹೆಸರುಗಳು ಅಳಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ವಿರೋಧ ಪಕ್ಷಗಳು ವ್ಯಕ್ತಪಡಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸುತ್ತಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿನ ಪ್ರತಿಭಟನೆಯ ಬಳಿಕವೂ ಹೋರಾಟ ಮುಂದುವರಿಸುವುದಾಗಿ ದೀಪ್ಕೆ ಹೇಳಿದ್ದಾರೆ.