ವಿಜಯ್ ಶಂಕರ್
ಕೊರಟಗೆರೆ : ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಯಾದ ಬಿ.ಡಿ.ಪುರ-ಹೊಳವನಹಳ್ಳಿ ರಸ್ತೆಯಿಂದ ಶಕುನಿ ತಿಮ್ಮನಹಳ್ಳಿ, ದೊಡ್ಡಸಾಗ್ಗೆರೆ ಮಾರ್ಗವಾಗಿ ದೊಡ್ಡಬಳ್ಳಾಪುರ-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಸ್ತೆಯಲ್ಲಿ ಎರಡೂ ಬದಿಗಳಲ್ಲಿ ಬೆಳೆದಿರುವ ಸೀಮೆಜಾಲಿ ಮತ್ತು ಕಾಡು ಪೊದೆಗಳಿಂದಾಗಿ ವಾಹನ ಸವಾರರು ಪ್ರತಿನಿತ್ಯ ಜೀವಭಯದಲ್ಲಿ ಸಂಚರಿಸುವಂತಾಗಿದೆ.
ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಈ ರಸ್ತೆಯು ಹೊಳವನಹಳ್ಳಿ, ಬಿ.ಡಿ.ಪುರ, ದೊಡ್ಡಸಾಗ್ಗೆರೆ, ಶಕುನಿ ತಿಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಜೀವನಾಡಿಯಾಗಿದೆ. ಈ ಮಾರ್ಗವಾಗಿ ಪ್ರತಿದಿನ ಸಾವಿರಾರು ಜನರು ಕೊರಟಗೆರೆ, ದೊಡ್ಡಬಳ್ಳಾಪುರ ಮತ್ತು ಬೆಂಗಳೂರಿನತ್ತ ಕೆಲಸ, ವ್ಯಾಪಾರ ಮತ್ತು ಆಸ್ಪತ್ರೆ ಕಾರ್ಯಗಳಿಗೆ ತೆರಳುತ್ತಾರೆ. ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುತ್ತಾರೆ.
ಕಳೆದ ಎರಡು ಮೂರು ವರ್ಷಗಳಿಂದ ರಸ್ತೆಯ ಇಕ್ಕೆಲಗಳಲ್ಲಿ ಸೀಮೆಜಾಲಿ ಪೊದೆಗಳು ವಿಪರೀತವಾಗಿ ಬೆಳೆದು ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿವೆ. ಇದರಿಂದ ಎದುರಿನಿಂದ ಬರುವ ವಾಹನಗಳು ಕಾಣುತ್ತಿಲ್ಲ. ಒಂದು ವಾಹನಕ್ಕೆ ದಾರಿ ಬಿಡಲು ಇನ್ನೊಂದು ವಾಹನವನ್ನು ನಿಲ್ಲಿಸಲೇಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಪರಿಸ್ಥಿತಿ ಇನ್ನೂ ಭೀಕರವಾಗಿದೆ.

ದ್ವಿಚಕ್ರ ವಾಹನ ಸವಾರರ ಗೋಳು ಹೇಳತೀರದು. ವೇಗವಾಗಿ ಹೋಗುವಾಗ ಪೊದೆಗಳ ಮುಳ್ಳಿನ ರೆಂಬೆಗಳು ನೇರವಾಗಿ ಮುಖ, ಕಣ್ಣು ಮತ್ತು ಕುತ್ತಿಗೆಗೆ ಬಡಿದು ಗಾಯಗಳಾಗುತ್ತಿವೆ. ಹಲವು ಬಾರಿ ಸಣ್ಣ-ಪುಟ್ಟ ಅಪಘಾತಗಳು ನಡೆದಿದ್ದರೂ, ಗ್ರಾಮೀಣ ಭಾಗವಾದ್ದರಿಂದ ಯಾರೂ ಅಧಿಕೃತವಾಗಿ ಪ್ರಕರಣ ದಾಖಲಿಸಿಲ್ಲ.
ಅತ್ಯಂತ ಆತಂಕಕಾರಿ ವಿಷಯವೆಂದರೆ ತುರ್ತು ಆರೋಗ್ಯ ಸೇವೆ. ಗ್ರಾಮಗಳಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಆಂಬುಲೆನ್ಸ್ ಅಥವಾ ಖಾಸಗಿ ವಾಹನದಲ್ಲಿ ಈ ರಸ್ತೆಯಲ್ಲೇ ಆಸ್ಪತ್ರೆಗೆ ಕರೆದೊಯ್ಯಬೇಕು. ಪೊದೆಗಳಿಂದಾಗಿ ವೇಗವಾಗಿ ಹೋಗಲು ಸಾಧ್ಯವಾಗದೆ ರೋಗಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ.
ಈ ರಸ್ತೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ್ದು, ವರ್ಷಕ್ಕೊಮ್ಮೆ ಜಂಗಲ್ ತೆರವು ಕಾರ್ಯಾಚರಣೆ ಮಾಡುವುದು ಕಡ್ಡಾಯವಾಗಿದೆ. ಆದರೆ ಮೂರು ವರ್ಷ ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಕಾರ್ಯಪಾಲಕ ಅಭಿಯಂತರ (ಇಇ) ದಯಾನಂದ್ ಅವರು ಕಚೇರಿಯಲ್ಲಿ ಕುಳಿತು ಸಂಬಳ ಪಡೆಯುವುದನ್ನು ಬಿಟ್ಟು, ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಇಕ್ಕೆಲಗಳ ಪೊದೆಗಳನ್ನು ತೆರವುಗೊಳಿಸಬೇಕು ಎಂದು ಬಿ.ಡಿ.ಪುರ, ಹೊಳವನಹಳ್ಳಿ, ದೊಡ್ಡಸಾಗ್ಗೆರೆ, ಶಕುನಿ ತಿಮ್ಮನಹಳ್ಳಿ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ರಸ್ತೆಯಲ್ಲಿ ಜಂಗಲ್ ತೆರವು ಮಾಡಿ ಸುಮಾರು ಎರಡು ಮೂರು ವರ್ಷಗಳಾಗಿವೆ ಎದುರಿಗೆ ಬರುವ ವಾಹನಗಳು ಕಾಣುವುದಿಲ್ಲ ಹಾಗಾಗಿ ಈಗಾಗಲೇ ಸಾಕಷ್ಟು ಬಾರಿ ಅಪಘಾತ ಸಂಭವಿಸಿದೆ ಆದರೆ ಜಂಗಲ್ ತೆರವು ಕಾರ್ಯಾಚರಣೆ ಮಾಡಿಲ್ಲ . ಜಿಲ್ಲಾ ಪಂಚಾಯತ್ ಎಇಇ ಈ ಕಡೆ ಗಮನ ಹರಿಸಿ ತ್ವರಿತವಾಗಿ ಜಂಗಲ್ ತೆರವು ಮಾಡಬೇಕು ಇಲ್ಲವಾದಲ್ಲಿ ನಾವು ಪ್ರತಿಭಟನೆ ದಾರಿ ಹಿಡಿಯಬೇಕು ಇದೆ. - ಕದರಹನುಮಯ್ಯ. ಆಟೊ ಚಾಲಕ ಹಾಗೂ ದಲಿತ ಮುಖಂಡ
