ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
ತುರುವೇಕೆರೆ: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರುಗಳು ಮುಂಬರುವ ವಿಧಾನಸಭಾ ಚುನಾವಣೆವರೆಗೂ ಮೈತ್ರಿ ಮುಂದುವರೆಸುವ ಆಶಯವನ್ನು ಪ್ರತಿನಿತ್ಯ ಪಠಿಸುತ್ತಿದ್ದಾರೆ. ಮೈತ್ರಿ ಇದ್ದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಸುಲಭ ಹಾಗೂ ಹೆಚ್ಚಿನ ಸ್ಥಾನ ಗಳಿಸಿ ಮೈತ್ರಿ ಸರ್ಕಾರ ರಚಿಸಬಹುದೆನ್ನುವ ಉದ್ದೇಶ ನಾಯಕರುಗಳದ್ದಾಗಿದೆ. ಹೀಗಾದಲ್ಲಿ ೨೦೨೮ರ ಚುನಾವಣೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರ ಎನ್.ಡಿ.ಎ. ಮೈತ್ರಿ ಟಿಕೆಟ್ ಯಾರಿಗೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ತುರುವೇಕೆರೆಯ ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ, ಜೆಡಿಎಸ್ ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರುವಾಸಿಯಾಗಿವೆ. ಕಳೆದ ೨೦೨೪ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ (ಜೆಡಿಎಸ್ ಮೈತ್ರಿ) ಅಭ್ಯರ್ಥಿಯಾಗಿ ವಿ.ಸೋಮಣ್ಣ ಸ್ಪರ್ಧಿಸಿದ್ದರು. ಸೋಮಣ್ಣನವರ ಗೆಲುವಿಗಾಗಿ ಜೆಡಿಎಸ್‌ನ ಶಾಸಕ ಎಂ.ಟಿ.ಕೃಷ್ಣಪ್ಪ, ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಕೆಲವೇ ತಿಂಗಳ (೨೦೨೩ ರಲ್ಲಿ) ಹಿಂದೆ ನಡೆದಿದ್ದ ವಿಧಾನಸಭಾ ಚುನಾವಣಾ ಹೋರಾಟ, ಪರಸ್ಪರ ಟೀಕೆಗಳು, ಸೋಲು, ಗೆಲುವು, ಫಲಿತಾಂಶ ಎಲ್ಲವನ್ನೂ ಮರೆತು ಕ್ಷೇತ್ರದಾದ್ಯಂತ ಜೋಡೆತ್ತಿನಂತೆ ಪ್ರಚಾರ ಕೈಗೊಂಡು, ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿ ಸೋಮಣ್ಣನವರ ಗೆಲುವಿಗೆ ಶ್ರಮಿಸಿದ್ದರು. ಇದೇ ವೇಳೆ ಪಕ್ಷದ ತೀರ್ಮಾನದಂತೆ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಸಹ ತಮ್ಮದೇ ಬೆಂಬಲಿಗರ ಪಡೆಯೊಂದಿಗೆ ಸೋಮಣ್ಣನವರ ಪರ ಪ್ರಚಾರ ಕೈಗೊಂಡಿದ್ದರು
ಕಳೆದ ೨೦೨೩ರ ವಿಧಾನಸಭಾ ಚುನಾವಣೆ ವೇಳೆ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ಆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಬೆಂಬಲಿಗರು, ಅಭಿಮಾನಿಗಳ ಒತ್ತಾಯದ ಮೇರೆಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಘೋಷಿಸಿದ್ದಾರೆ. ಹಾಲಿ ಶಾಸಕರಿಗೆ ಟಿಕೆಟ್ ನೀಡಿದಲ್ಲಿ ಮೈತ್ರಿ ಅಭ್ಯರ್ಥಿ ಯಾಗಿ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಕಣಕ್ಕಿಳಿ ಯುವುದು ಬಹುತೇಕ ಖಚಿತವಾಗಲಿದೆ. ಕ್ಷೇತ್ರದ ಅಭಿವೃದ್ದಿಯಲ್ಲಿ ಮಹತ್ತರ ಕೊಡುಗೆ ನೀಡಿ, ದಿಟ್ಟ ಆಡಳಿತಗಾರ, ಹೋರಾಟಗಾರ ಎಂದು ಗುರುತಿಸಿಕೊಂಡಿರುವ ಎಂ.ಟಿ.ಕೃಷ್ಣಪ್ಪ ಒಮ್ಮೆ ಸಚಿವರಾಗುವ ಕನಸನ್ನೂ ಸಹ ಕಂಡಿದ್ದಾರೆ. ಮುಂದಿನ ೨೦೨೮ರ ಚುನಾವಣೆಯಲ್ಲಿ ಕಣಕ್ಕಿಳಿದು ಜಯಗಳಿಸಿದರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದರೆ ಜೆಡಿಎಸ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾದ ದೇವೇಗೌಡರು, ಕುಮಾರಸ್ವಾಮಿ ಅವರ ಕಿಚನ್ ಕ್ಯಾಬಿನೆಟ್ ಸದಸ್ಯರಾಗಿರುವ ಎಂ.ಟಿ.ಕೃಷ್ಣಪ್ಪ ಅವರು ಸಚಿವರಾಗುವುದು ನಿಶ್ಚಿತವಾಗಲಿದೆ.
೨೦೧೮ರ ಚುನಾವಣೆಯಲ್ಲಿ ಗೆದ್ದು ತುರುವೇಕೆರೆ ಕ್ಷೇತ್ರದ ಶಾಸಕರಾಗಿ ನೂರಾರು ಕೋಟಿ ರೂಗಳ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡಿ ಜನಪ್ರಿಯತೆ ಗಳಿಸಿದ್ದ ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಅವರು ಸಹ ಬಿಜೆಪಿ ಅಥವಾ ಎನ್.ಡಿ.ಎ. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮೊದಲ ಬಾರಿ ಶಾಸಕರಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈಗ ೨೦೨೮ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವುದಲ್ಲದೆ ಮುಂಬರುವ ಮೈತ್ರಿ ಸರ್ಕಾರದಲ್ಲಿ ಸಚಿವರಾಗುವ ಆಶಯವನ್ನೂ ಹೊಂದಿದ್ದಾರೆ. ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ, ಎಲ್ಲಾ ಪಕ್ಷಗಳ ಮುಖಂಡರು, ಕಾರ್ಯಕರ್ತ ರೊಂದಿಗೆ ಆತ್ಮೀಯ ಒಡನಾಟ, ಅಭಿವೃದ್ದಿ ಪರ ಆಡಳಿತದಿಂದ ಮನೆಮಾತಾಗಿರು ವ ಮಸಾಲಾ ಜಯರಾಮ್ ಸ್ಪರ್ಧೆ ಮಾಡಬೇಕೆಂಬುದು ಆತ್ಮೀಯರ ಆಶಯವಾಗಿದೆ. ರಾಷ್ಟ್ರೀಯ, ರಾಜ್ಯ ನಾಯಕರು ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ, ಟಿಕೆಟ್ ತರುವ ಜವಾಬ್ದಾರಿ ನನ್ನದು, ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಮಸಾಲಾ ಜಯರಾಮ್ ಕಾರ್ಯಕರ್ತರಿಗೆ ವಿಶ್ವಾಸದ ನುಡಿಗಳನ್ನಾಡಿದ್ದಾರೆ.
ಈ ನಡುವೆ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ೨೦೨೮ರಲ್ಲಿ ಜೆಡಿಎಸ್ ಅಥವಾ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಟಿಕೆಟ್ ಪಡೆಯಲು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ದೊಡ್ಡಾಘಟ್ಟ ಚಂದ್ರೇಶ್ ಕ್ಷೇತ್ರದಾದ್ಯಂತ ಬಿರುಸಿನ ಸಂಚಾರ ಮಾಡುತ್ತಿದ್ದು, ಪಕ್ಷ ಸಂಘಟನೆಯ ಜೊತೆಗೆ ಚಂದ್ರೇಶ್ ಸೇವಾ ಟ್ರಸ್ಟ್ ಮೂಲಕ ಹಲವು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಈ ಬಾರಿ ಯುವಕರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶವನ್ನಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಕುಮಾರಣ್ಣನಿಂದ ಟಿಕೆಟ್ ಪಡೆಯುವ ಆಶಯವನ್ನು ಹೊಂದಿದ್ದಾರೆ. ಚಂದ್ರೇಶ್ ಬೆಂಬಲಿಗರೂ ಸಹ ಪಕ್ಷದ ಹಿತದೃಷ್ಟಿಯಿಂದ ಯೂತ್ ಐಕಾನ್ ಆಗಿರುವ ಚಂದ್ರೇಶ್ ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
೨೦೨೮ರಲ್ಲಿ ತುರುವೇಕೆರೆ ಕ್ಷೇತ್ರ ಮೈತ್ರಿಯಲ್ಲಿ ಯಾವ ಪಕ್ಷದ ಪಾಲಾಗುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ. ಎಂ.ಟಿ.ಕೃಷ್ಣಪ್ಪ ಅಭ್ಯರ್ಥಿಯಾದರೆ ಮಸಾಲಾ ಜಯರಾಮ್ ಬೆಂಬಲಿಸುತ್ತಾರಾ? ಮಸಾಲಾ ಜಯರಾಮ್ ಅಭ್ಯರ್ಥಿಯಾದರೆ ಎಂ.ಟಿ.ಕೃಷ್ಣಪ್ಪ ನಡೆ ಏನು? ದೊಡ್ಡಾಘಟ್ಟ ಚಂದ್ರೇಶ್ ಮೈತ್ರಿ ಅಭ್ಯರ್ಥಿಯಾದರೆ ಶಾಸಕ ಹಾಗೂ ಮಾಜಿ ಶಾಸಕರ ನಿಲುವೇನು? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಮೈತ್ರಿ ಉಳಿಯುವುದೋ? ಮುರಿದು ಬೀಳುವುದೋ? ಕಾಲವೇ ನಿರ್ಧರಿಸಲಿದೆ. ಮೈತ್ರಿ ಮುಂದುವರೆದರೆ ಯಾರಿಗೆ ಅದೃಷ್ಟ ತಂದುಕೊಡುತ್ತದೆಯೋ ಕಾದುನೋಡಬೇಕಿದೆ.