ತುಮಕೂರು: ಕಲ್ಪತರು ನಾಡಿನಲ್ಲಿ ದಸರಾ ವೈಭವ ಸಾಂಸ್ಕೃತಿಕ ಲೋಕದ ಅನಾವರಣ ಮಾಡಿದೆ. ದೇವಿಯ ಆರಾಧನೆಯೊಂದಿಗೆ ಮನರಂಜನೆ ಹಾಗೂ ಜ್ಞಾನ ಲೋಕದ ವಿಹಾರವನ್ನೂ ಈ ಬಾರಿ ನೋಡುಗರಿಗಾಗಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿ ದಸರಾ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಈಗ ಮೂರು ಆನೆಗಳ ನಡಿಗೆಯ ಜಂಬೂ ಸವಾರಿಯತ್ತ ಎಲ್ಲರ ಚಿತ್ತ ನೆಟ್ಟಿದ್ದು, ಕುತೂಹಲ ಹಾಗೂ ಕಾತರ ಹೆಚ್ಚಿಸಿದೆ. ತಾಲೀಮು ಪಡೆದ ಗಜಪಡೆಯ ಜಂಬೂ ಸವಾರಿಗೆ ಕಲ್ಪತರು ನಾಡು ಈಗ ಸರ್ವ ರೀತಿಯಲ್ಲೂ ಸಜ್ಜಾಗಿದೆ.
ತುಮಕೂರು ದಸರಾದ ಜಂಬೂ ಸವಾರಿ ಅಕ್ಟೋಬರ್ 21 ರಂದು ವೈಭವಯುತವಾಗಿ ನಡೆಯಲಿದೆ. ಜಂಬೂ ಸವಾರಿಗೆಂದು ನಗರಕ್ಕೆ ಆಗಮಿಸಿದ್ದ ಗಜಪಡೆಗೆ ಎಲ್ಲ ರೀತಿಯ ತಯಾರಿ ನೀಡಲಾಗಿದೆ. ತಾಲೀಮು ಪಡೆದ ಮೂರು ಆನೆಗಳ ಪಡೆ ನಗರದ ಪ್ರಮುಖ ರಸ್ತೆಗಳಲ್ಲಿ ಅಂಬಾರಿಹೊತ್ತು ಸಾಗುವ ನಯನ ಮನೋಹರ ಕ್ಷಣಕ್ಕಾಗಿ ಈಗ ಕಾತರ ಹೆಚ್ಚಾಗುತ್ತಿದೆ.
ಈ ಬಾರಿ ಜಂಬೂ ಸವಾರಿಯಲ್ಲಿ ಮೂರು ಆನೆಗಳು ಹೆಜ್ಜೆ ಹಾಕಲಿವೆ. ಅಂಬಾರಿಯನ್ನು ಮಡಿಕೇರಿ ದುಬಾರೆ ಆನೆ ಶಿಬಿರದ 35 ವರ್ಷದ ಲಕ್ಷ್ಮಣ ಹೊರಲಿದ್ದು, ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮಿ ಹಾಗೂ ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಲಕ್ಷ್ಮಿ ಲಕ್ಷ್ಮಣನ ಜೊತೆ ಗಾಂಭೀರ್ಯದ ನಡಿಗೆಯಲ್ಲಿ ಹೆಜ್ಜೆಹಾಕಲಿವೆ.
ಜಂಬೂ ಸವಾರಿ ಮೆರವಣಿಗೆ ಸಾಗಲಿರುವ ನಗರದ ಬಿ.ಜಿ.ಎಸ್. ವೃತ್ತ - ಚರ್ಚ್ ಸರ್ಕಲ್ - ಡಿ.ಸಿ. ಕಚೇರಿ - ಅಮಾನಿಕೆರೆ ರಸ್ತೆ - ಶಿವಕುಮಾರ ಸ್ವಾಮೀಜಿ ಸರ್ಕಲ್ - ಜೂನಿಯರ್ ಕಾಲೇಜು ಮೈದಾನದ ರಸ್ತೆ ಮಾರ್ಗದಲ್ಲಿ ಆನೆಗಳಿಗೆ ತಾಲೀಮು ನೀಡಲಾಗಿದ್ದು, ಅ.21ರ ಆ ಗಜ ಗಾಂಭೀರ್ಯದ ನಡಿಗೆಯ ಜಂಬೂ ಸವಾರಿಗಾಗಿ ತುಮಕೂರು ಜಿಲ್ಲೆಯ ಜನ ಎದುರು ನೋಡುತ್ತಿದ್ದಾರೆ.