ತುಮಕೂರು: ಪ್ರತಿನಿತ್ಯ ತುಮಕೂರು ನಗರದ ತುಂಬ ಸುತ್ತಾಡುತ್ತಾ, ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾ, ನಗರದ ಮನೆಮಾತಾಗಿರುವ ಹೊರಪೇಟೆಯ ಕರಿಬಸವಸ್ವಾಮಿ ಮಠದ ೩೩ ವರ್ಷ ವಯಸ್ಸಿನ ಹೆಣ್ಣಾನೆ ಲಕ್ಷ್ಮಿಯ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಅನೇಕ ನಿರ್ಬಂಧಗಳನ್ನು ವಿಧಿಸಿರುವ ಬಗ್ಗೆ ತುಮಕೂರು ನಗರದ ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಅವರು ಆರ್.ಟಿ.ಐ. ಅರ್ಜಿ ಮೂಲಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಆನೆಯನ್ನು ದೀರ್ಘಕಾಲ ಬಿಸಿಲಿನಲ್ಲಿ ನಿಲ್ಲಿಸುವಂತಿಲ್ಲ; ಟಾರ್ ರಸ್ತೆಯಲ್ಲಿ ನಡೆಸುವಂತಿಲ್ಲ; ಜನಸಂದಣಿಯ ಸ್ಥಳಗಳಿಗೆ ಕರೆದೊಯ್ಯುವಂತಿಲ್ಲ; ಭಿಕ್ಷಾಟನೆಗೆ ಬಳಸುವಂತಿಲ್ಲ; ಅಸಮಂಜಸ ಅಲಂಕಾರಿಕ ಉಡುಪು ಹಾಕುವಂತಿಲ್ಲ ಎಂಬುದೂ ಸೇರಿದಂತೆ ಆನೆಯ ವಾಸಸ್ಥಳದಿಂದ ಹಿಡಿದು, ಅದರ ನೀರು-ಆಹಾರ-ನೈರ್ಮಲ್ಯ, ಆರೋಗ್ಯ ತಪಾಸಣೆ, ಆನೆಯ ಸಾಗಾಣಿಕೆ, ಆನೆಯ ಬಳಕೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಹಲವು ಸ್ಪಷ್ಟ ನಿಬಂಧನೆಗಳನ್ನು ವಿಧಿಸಿರುವುದು ಈ ಮಾಹಿತಿಯ ಮೂಲಕ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸೋಮಣ್ಣ ಎಂಬ ಆನೆಯು ಅಂಬಾರಿ ಸಮೇತ ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿ ಅಪಾರ ಹಾನಿ ಉಂಟಾದ ಘಟನೆಯ ಹಿನ್ನೆಲೆಯಲ್ಲಿ, ತುಮಕೂರಿನ ಲಕ್ಷ್ಮಿ ಆನೆಯ ಬಗ್ಗೆ ಅರಣ್ಯ ಇಲಾಖೆ ವಿಧಿಸಿರುವ ನಿರ್ಬಂಧಗಳ ಬಗ್ಗೆ ತಾವು ೨೦೨೩ ರಲ್ಲಿ ಆರ್.ಟಿ.ಐ. ಮೂಲಕ ಪಡೆದಿದ್ದ ಮಾಹಿತಿಗಳನ್ನು ಇದೀಗ ಸಾರ್ವಜನಿಕರ ಮಾಹಿತಿಗಾಗಿ ಹಂಚಿಕೊಳ್ಳುತ್ತಿರುವುದಾಗಿ ಆರ್.ವಿಶ್ವನಾಥನ್ ಹೇಳಿದ್ದಾರೆ.
ಪ್ರಮುಖ ನಿಬಂಧನೆಗಳು
ಲಕ್ಷ್ಮಿ ಎಂಬ ಮರಿ ಆನೆಯನ್ನು ೧೯೯೩ ರಲ್ಲಿ ಇಲ್ಲಿನ ಮಠಕ್ಕೆ ಹಸ್ತಾಂತರಿಸಲಾಗಿದ್ದು, ಆ ಆನೆಯ ಯೋಗಕ್ಷೇಮಕ್ಕಾಗಿ ಅರಣ್ಯ ಇಲಾಖೆಯು ೧೯ ನಿಬಂಧನೆಗಳನ್ನು ವಿಧಿಸಿದೆ. ಅದರ ಪ್ರಕಾರ, ಈ ಆನೆಯನ್ನು ಅದರ ಮಾಲೀಕರು ತಮ್ಮ ವ್ಯಾಪ್ತಿಯ ಧಾರ್ಮಿಕ ಆಚರಣೆಗಳಿಗೆ ಮಾತ್ರ ಬಳಸಬಹುದೆಂದು ಸ್ಪಷ್ಟಪಡಿಸಿದೆ.
ಒಂದು ಆನೆಯ ವಾಸಕ್ಕಾಗಿ ೮೦ ಚದರ ಮೀಟರ್ ನೆಲದ ವಿಸ್ತೀರ್ಣವುಳ್ಳ ಹಾಗೂ ಐದೂವರೆ ಮೀಟರ್‌ಗಳಿಗಿಂತ ಕಡಿಮೆಯಿಲ್ಲದಂತೆ ಮೇಲ್ಛಾವಣಿ ಹೊಂದಿರುವ ಎರಡು ಪರ್ಯಾಯ ಶೆಡ್‌ಗಳು ಇರಬೇಕು. ಶೆಡ್‌ನ ನೆಲವು ಮಣ್ಣು ಅಥವಾ ಮರಳಿನಿಂದ ಕೂಡಿರಬೇಕು. ಆನೆಯ ಮೂತ್ರ ಮತ್ತು ಸಗಣಿ (ಲದ್ದಿ)ಯು ಆನೆಗೆ ನೀಡುವ ಆಹಾರದೊಡನೆ ಬೆರೆಯದಂತೆ ಮಾಡಲು, ಆನೆಯ ಹಿಂಬದಿಯಲ್ಲಿ ಸರಾಗವಾಗಿ ಹರಿದುಹೋಗುವಂತಹ ಚರಂಡಿ ಇರಬೇಕು. ಆನೆ ಶೆಡ್‌ನ ಸುತ್ತಲೂ ಕಸ ಸಂಗ್ರಹ ಆಗದಂತಿರಬೇಕು. ಆನೆಯ ವಯಸ್ಸಿಗೆ ಅನುಗುಣವಾಗಿ ಪ್ರತಿದಿನ ೫೦ ರಿಂದ ೧೦೦ ಲೀಟರ್‌ಗಳ? ಕುಡಿಯಲು ಯೋಗ್ಯವಾದ ಅಥವಾ ಹರಿಯುವ ನೀರನ್ನು ಒದಗಿಸಬೇಕು. ಆನೆಯ ಮಾಲೀಕರು ನಿಯಮಿತವಾಗಿ, ಸಾಧ್ಯವಾದರೆ ತಿಂಗಳಿಗೊಮ್ಮೆ, ಸ್ಥಳೀಯ ಪಶುವೈದ್ಯರು ಅಥವಾ ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿಗಳಿಂದ ಆನೆಯ ಆರೋಗ್ಯ ತಪಾಸಣೆ ಮಾಡಿಸಬೇಕು. ಆನೆಗಳಿಗೆ ತಗಲಬಹುದಾದ ರೋಗಗಳ ವಿರುದ್ಧ ಅಗತ್ಯ ಲಸಿಕೆಗಳನ್ನು ಹಾಕಿಸಬೇಕಾಗಿದೆ ಎಂದು ಅರಣ್ಯ ಇಲಾಖೆ ನಿರ್ದೇಶಿಸಿದೆ.
ಇನ್ನು ಆನೆಯನ್ನು ಜನಸಂದಣಿ ಹೆಚ್ಚಿರುವ ಹಾಗೂ ಜನವಸತಿ ಪ್ರದೇಶಗಳಿಗೆ ಕರೆದೊಯ್ಯಬಾರದು. ಆನೆಯನ್ನು ಭಿಕ್ಷಾಟನೆಗಾಗಿ ಬಳಸಬಾರದು. ಧಾರ್ಮಿಕ ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ, ದಿನದ ಹೆಚ್ಚು ಬಿಸಿಲಿರುವ ಸಮಯದಲ್ಲಿ ಅಥವಾ ದೀರ್ಘಕಾಲ ನಿರಂತರವಾಗಿ ವಿಶ್ರಾಂತಿ ನೀಡದೆ, ಡಾಂಬರು ರಸ್ತೆಗಳ ಮೇಲೆ ಅಥವಾ ಇತರ ಮಾರ್ಗಗಳಲ್ಲಿ ಆನೆಯನ್ನು ನಡೆಸಿಕೊಂಡು ಹೋಗುವುದನ್ನು ನಿ?ಧಿಸಲಾಗಿದೆ. ಅಂತೆಯೇ ಆನೆಯ ಬೆನ್ನಿನ ಮೇಲೆ ಯಾವುದೇ ಭಾರವನ್ನು ಅಸಮರ್ಪಕವಾಗಿ ಇಡುವುದೂ ನಿಷಿದ್ಧವೆಂದು ಅರಣ್ಯ ಇಲಾಖೆ ಹೇಳಿದೆ.
ಆನೆಗಳನ್ನು ದೀರ್ಘಕಾಲದವರೆಗೆ ಬಿಸಿಲಿನಲ್ಲಿ ನಿಲ್ಲಿಸುವುದು ಅಥವಾ ಧಾರ್ಮಿಕ ಸಮಾರಂಭಗಳಿಗಾಗಿ ಅಸಮಂಜಸವಾಗಿ ದೀರ್ಘಕಾಲದವರೆಗೆ ಅಲಂಕಾರಿಕ ವಸ್ತುಗಳು ಹಾಗೂ ಸಮಾರಂಭದ ಉಡುಪುಗಳನ್ನು ಧರಿಸುವಂತೆ ಮಾಡಿ ಅವುಗಳಿಗೆ ನೋವು ಅಥವಾ ಸಂಕಟ ಉಂಟುಮಾಡುವುದು ಹಾಗೂ ಅವುಗಳ ಬಳಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆಯೆಂದು ಅರಣ್ಯ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.
ಇಷ್ಟಲ್ಲದೆ ಆನೆಯನ್ನು ಒಂದೆಡೆಯಿಂದ ಇನ್ನೊಂದು ಸ್ಥಳಕ್ಕೆ ಟ್ರಕ್ ಮೂಲಕ ಸಾಗಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾನದಂಡಗಳನ್ನು ಸೂಚಿಸಿರುವ ಅರಣ್ಯ ಇಲಾಖೆಯು, ಅಂತಿಮವಾಗಿ ತಾನು ವಿಧಿಸಿರುವ ಷರತ್ತುಗಳ ಪಾಲನೆಯಲ್ಲಿ ಲೋಪವಾದರೆ ಸದರಿ ಆನೆಯ ಮಾಲೀಕತ್ವದ ಪತ್ರವನ್ನು ರದ್ದು ಮಾಡುವುದಾಗಿಯೂ, ಆನೆಯನ್ನು ಇಲಾಖೆಯ ಸುಪರ್ದಿಗೆ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿರುವ ಪ್ರಮುಖ ಅಂಶಗಳು ಈ ಮಾಹಿತಿಯಲ್ಲಿವೆಯೆಂದು ಆರ್.ವಿಶ್ವನಾಥನ್ ತಿಳಿಸಿದ್ದಾರೆ.