ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಶ್ರೀಕ್ಷೇತ್ರ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ದೇವಾಲಯಕ್ಕಿಂದು ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಹಾಗೂ ಹಿರಿಯ ಕಲಾವಿದೆ ಡಾ: ಉಮಾಶ್ರೀ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಉಪ ಸಭಾಪತಿಯವರನ್ನು ಮಂಗಳವಾದ್ಯಗಳೊಂದಿಗೆ ದೇಗುಲಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಉಮಾಶ್ರೀ ಅವರು, ಶ್ರೀ ತೋಂಟದ ಸಿದ್ಧಲಿಂಗರವರ ನಿರ್ವಿಕಲ್ಪ ಶಿವಯೋಗ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಪಡೆದು, ನಾಡಿಗೆ ಉತ್ತಮ ಮಳೆ ಬೆಳೆಯಾಗಲಿ; ನಾಡಿನ ಸರ್ವರಿಗೂ ಒಳಿತಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿದರು.
ಬಳಿಕ ದೇವಾಲಯದ ವ್ಯವಸ್ಥಾಪನಾ ಮಂಡಳಿಯಿಂದ ಉಪಸಭಾಪತಿ ಡಾ: ಉಮಾಶ್ರೀ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ್ದ ಸಹಭಕ್ತರೊಂದಿಗೆ ಬೆರೆತು ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಉಪ ಸಭಾಪತಿಯವರ ಹಿರಿಯ ಆಪ್ತ ಸಹಾಯಕ ರಾಮಮೂರ್ತಿ, ಇನ್ನಿತರರು ಉಪಸ್ಥಿತರಿದ್ದರು. ನಂತರ, ಯಡಿಯೂರು ಶ್ರೀ ಕ್ಷೇತ್ರದ ಪ್ರಸಾದ ಮಂದಿರಕ್ಕೆ ತೆರಳಿದ ಉಪಸಭಾಪತಿ ಡಾ: ಉಮಾಶ್ರೀ ಅವರು, ಪ್ರಸಾದ ಮಂದಿರದ ಮಹಿಳೆಯರೊಂದಿಗೆ ಸೇರಿ ಹೋಳಿಗೆ ಮಾಡಿದರು. ತದನಂತರ, ಭೋಜನಾಲಯದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ದಾಸೋಹಕ್ಕೆ ಚಾಲನೆ ನೀಡಿದರು. ಅಲ್ಲದೆ, ಸಹಭಕ್ತರಿಗೆ ಭೋಜನ ಬಡಿಸಿದರು. ತಾವು ಕೂಡ ಸಹಪಂಕ್ತಿಯಲ್ಲಿ ಕುಳಿತು ಪ್ರಸಾದ ಸವಿದು ಸಂತಸಪಟ್ಟರು.