ತುಮಕೂರು: ಪ್ರಸ್ತುತ ದಿನ ಮಾನಗಳಲ್ಲಿ ಮಕ್ಕಳು ಅನೇಕ ರೀತಿಯ ಮಾನಸಿಕ ಸಮಸ್ಯೆಯನ್ನು ಎದುರಿಸುತಿದ್ದಾರೆ ಹಾಗು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ತುಮಕೂರಿನ ಮನ:ಸ್ಪರ್ಶ ಸೆಂಟರ್ ಫಾರ್ ವೆಲ್ ಬಿಯಿಂಗ್ನ ಸಂಸ್ಥಾಪಕರು ಹಾಗು ಮನಶಾಸ್ತ್ರಜ್ಞರಾದ ಡಾ. ಟವಿಕುಮಾರ್ಎಸ್.ಪಿ ರವರ ನೇತೃತ್ವದಲ್ಲಿ ʼಅರಳಲಿ ಬಾಲ್ಯ ಅರಳಲಿ ಮನಸ್ಸುʼ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಮುಖಾಂತರ ಮಕ್ಕಳ ಮಾನಸಿಕ ಆರೋಗ್ಯದ ಹಾಗು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಅಭಿಯಾನವು ಇಂದಿನಿಂದ ಅಂದರೆ ದಿನಾಂಕ 10-10-2026 ರಿಂದ 10-10-2027ರವರೆಗೆ ಒಂದು ವರ್ಷಗಳ ಕಾಲ ನಡೆಯಲಿದೆ.
ಈ ಕಾರ್ಯಕ್ರಮದ ಮುಖಾಂತರ ತುಮಕೂರು ಜಿಲ್ಲೆಯಾದ್ಯಂತ ಹಾಗು ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿಶ್ವ ಮಾನಸಿಕ ಅರೋಗ್ಯ ದಿನಾಚರಣೆಯ ಅಂಗವಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತುಮಕೂರು ಶಾಖೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಹಿರಿಯ ಪತ್ರಕರ್ತರಾದ ಎಸ್. ನಾಗಣ್ಣ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಲೋಕೇಶ್ ಬಾಬು, ಹಾಗು ಡಾ.ಪದ್ಮಾಕ್ಷಿ ಲೋಕೇಶ್ ರವರು ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಯಶಸ್ವಿಯಾಗಲೆಂದು ಶುಭಹಾರೈಸಿದರು.