ತುರುವೇಕೆರೆ: ತಾಲ್ಲೂಕಿನ ಕ್ರಷರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಅರೆಬೆತ್ತಲೆ ಮಾಡಿ ಕಟ್ಟಿ ಹಾಕಿ ಆತನ ಮೇಲೆ ಕ್ರಷರ್ ಮಾಲೀಕ ಹಲ್ಲೆ ಮಾಡಿರುವ ಘಟನೆ ಕೋಳಘಟ್ಟ ಗ್ರಾಮದಲ್ಲಿ ಸಂಭವಿಸಿದೆ.
ತಾಲ್ಲೂಕಿನ ಕಸಬಾ ಹೋಬಳಿ ಕೊಳಘಟ್ಟ ಗ್ರಾಮದಲ್ಲಿ ಮಂಡ್ಯ ಮೂಲದ ರಾಜೇಗೌಡ ಎಂಬ ವ್ಯಕ್ತಿ ಜಲ್ಲಿ ಕ್ರಷರ್ ನಡೆಸುತ್ತಿದ್ದು, ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವುದಲ್ಲದೆ ಅನಗತ್ಯವಾಗಿ ಅಕ್ಕಪಕ್ಕದ ಗ್ರಾಮಗಳಿಗೆ ತೊಂದರೆಗಳನ್ನು ನೀಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಆರೋಪಿಸಿದ್ದಾರೆ.
ಕ್ರಷರ್ ನಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಭಿಷೇಕ್ ಎಂಬ ಕಾರ್ಮಿಕನನ್ನು ಹಣ ದುರುಪಯೋಗ ಮಾಡಿದ್ದಾನೆಂದು ಆತನನ್ನು ಅರೆಬೆತ್ತಲೆ ಮಾಡಿ ಆತನ ಎರಡು ಕೈಗಳನ್ನು ಕಿಟಕಿ ಸರಳಿಗೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಆತನ ಮೇಲೆ ಹಲ್ಲೆ ಮಾಡಿದ ದೃಶ್ಯದ ವಿಡಿಯೋ ತುಣುಕುಗಳು ಎಲ್ಲೆಡೆ ಹರಿದಾಡುತ್ತಿವೆ. ಅಭಿಷೇಕ್ ಹೊಸದುರ್ಗ ಮೂಲದವನಾಗಿದ್ದು ಬಹಳ ದಿನಗಳಿಂದ ಕ್ರಷರ್ ನಲ್ಲಿ ಕೆಲಸ ಮಾಡಿಕೊಂಡು ಇರುತ್ತಾರೆ. ಇವರು ಹಣ ದುರುಪಯೋಗ ಮಾಡಿದ್ದಾರೆ ಎಂದು ಈ ರೀತಿ ಬೆತ್ತಲೆ ಮಾಡಿ ಅವರ ಕೈಗಳನ್ನು ಬಂಧಿಸಿ ಬೆಲ್ಟ್ ನಲ್ಲಿ ಕ್ರಷರ್ ಮಾಲೀಕ ರಾಜೇಗೌಡ ಎಂಬ ವ್ಯಕ್ತಿ ಹಲ್ಲೆ ಮಾಡಿ ತಲೆ ಮರೆಸಿಕೊಂಡಿರುವುದು ಖಂಡನೀಯವಾಗಿದ್ದು, ಕೂಡಲೇ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸುಮೊಟೊ ಕೇಸು ದಾಖಲಿಸುವುದರ ಮೂಲಕ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಜೊತೆಗೆ ತುಮಕೂರು ಜಿಲ್ಲಾಧಿಕಾರಿಗಳು ಈ ಅಕ್ರಮ ಜಲ್ಲಿ ಕ್ರಷರನ್ನು ಈ ಕೂಡಲೇ ಮುಚ್ಚಿಸಬೇಕು. ಇಲ್ಲವೆಂದರೆ ವಿವಿದ ಸಂಘಟನೆಗಳೊಂದಿಗೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹಾಗೂ ಇತರೆ ಸಂಘಟನೆಗಳು ಈ ಮೂಲಕ ಒತ್ತಾಯಿಸಿವೆ.